Advertisement

ಕೋಟೆನಾಡಿನಲ್ಲಿ ದಸರಾ ವೈಭವ

05:19 PM Oct 10, 2018 | |

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವನ್ನು ನವದುರ್ಗಿಯರು ರಕ್ಷಿಸುತ್ತಾರೆ ಎಬ ಪ್ರತೀತಿ ಇದೆ. ಈ ನವದುರ್ಗಿಯರಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಜಿಲ್ಲಾದ್ಯಂತ ದಸರಾ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Advertisement

ನವರಾತ್ರಿ ಹಬ್ಬ ಬಯಲುಸೀಮೆಯ ಮುಖ್ಯ ಹಬ್ಬವಾಗಿದೆ. ಮೈಸೂರಿನ ಚಾಮುಂಡೇಶ್ವರಿ, ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರಿ, ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೆàಶ್ವರಿ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಪೂಜೆ ನಡೆಯುವಂತೆ ಚಿತ್ರದುರ್ಗ ಜಿಲ್ಲಾದ್ಯಂತ ದಸರಾವನ್ನು ಶ್ರದ್ಧಾ ಭಕ್ತಿಯಿಂದ
ಆಚರಿಸಲಾಗುತ್ತದೆ. ದೇವತಾ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳು, ನವಧಾನ್ಯ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಸೇರಿದಂತೆ ವೈಭವೋಪೇತವಾಗಿ ಸಿಂಗರಿಸಲಾಗುತ್ತದೆ. ಒಂಭತ್ತು ರಾತ್ರಿ ಹಾಗೂ ಹತ್ತು ಹಗಲು ಭಕ್ತರು ನವರಾತ್ರಿ ಪೂಜೆ ಮಾಡುತ್ತಾರೆ. ಚಿತ್ರದುರ್ಗ ನಗರದ ಅಧಿದೇವತೆಗಳ ದೇಗುಲಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಕೋಟೆ ನಾಡಿನ ರಕ್ಷಕ ದೇವತೆಗಳಾದ ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಕಣಿವೆ
ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ದೇವಾಲಯಗಳಲ್ಲಿ ಮೂಲ ಮತ್ತು ಉತ್ಸವ ಮೂರ್ತಿಗಳಿಗೆ ಅ. 10 ರಿಂದ
ಪ್ರತಿ ನಿತ್ಯ ವಿವಿಧ ಬಗೆಯ ಅಲಂಕಾರ ಮಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏಕನಾಥೇಶ್ವರಿ: ಕೋಟೆ ಮೇಲ್ಭಾಗದ ಏಕನಾಥೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಒಂಭತ್ತು ದಿನ ಬೆಳಿಗ್ಗೆ ವಿಶೇಷ ಪೂಜೆ ನೆರವೇರಲಿದೆ.

ಉಚ್ಚಂಗಿ ಯಲ್ಲಮ್ಮ: ಕೋಟೆ ರಸ್ತೆಯ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ವಿಜಯದಶಮಿಯಂದು ದೇವತೆಯ ಕೆಂಡಾರ್ಚನೆ ನೂರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮಹಾಕಾಳಮ್ಮ ದೇಗುಲದ ಬನ್ನಿ ಮರದ ಮುಂಭಾಗದಲ್ಲಿ ನೆರವೇರಲಿದೆ.

ಕಣಿವೆ ಮಾರಮ್ಮ: ನಗರ ಪೊಲೀಸ್‌ ಠಾಣೆ ಆವರಣದಲ್ಲಿನ ಕಣಿವೆ ಮಾರಮ್ಮ ದೇಗುಲದಲ್ಲಿ ನವ ದುರ್ಗಿಯರ ಅವತಾರದ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ನೂತನ ದೇಗುಲ ನಿರ್ಮಾಣಗೊಂಡ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿದೆ.

Advertisement

ಬರಗೇರಮ್ಮ: ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವತೆಯ ದೇಗುಲದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆ. ವಿಜಯದಶಮಿ ದಿನ ನವದುರ್ಗಿಯರೆಲ್ಲರಿಗೂ ಬನ್ನಿ ಪೂಜೆ ನೆರವೇರಲಿದೆ. ಅ. 20ರಂದು ಬರಗೇರಮ್ಮ ದೇವತೆಯ ಕೆಂಡಾರ್ಚನೆ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ
ವಿಜೃಂಭಣೆಯಿಂದ ನಡೆಯಲಿದೆ ಎಂದು ದೇಗುಲದ ಅರ್ಚಕ ಪೂಜಾರ್‌ ಸತ್ಯಪ್ಪ ತಿಳಿಸಿದ್ದಾರೆ. 

ದುರ್ಗಾಷ್ಟಮಿ ಪೂಜೆ: ನಗರದ ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಅ. 17 ರಂದು ಸಂಜೆ 5:30 ಗಂಟೆಗೆ ಪಾರ್ವತಿ ದೇವಿಗೆ ದುರ್ಗಾಷ್ಟಮಿ ಪೂಜೆ ನೆರವೇರಲಿದೆ. ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಗೋಪಾಲಪುರದ ದುರ್ಗಾ ಪರಮೇಶ್ವರಿ, ಜೆಸಿಆರ್‌ ಬಡಾವಣೆಯ ಗಣಪತಿ ದೇಗುಲಗಳಲ್ಲಿ ದೇವಿ ಪುರಾಣ ನಡೆಯಲಿದೆ. ಅಂತರಘಟ್ಟಮ್ಮ, ಅಂಬಾಭವಾನಿ, ಬನಶಂಕರಿ, ರೇಣುಕಾ ಯಲ್ಲಮ್ಮ ದೇಗುಲಗಳಲ್ಲೂ ದೇವತಾ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ನಗರ ಮಾತ್ರವಲ್ಲ, ಜಿಲ್ಲೆಯ ಎಲ್ಲ ಭಾಗಗಳಲ್ಲಿ ನವರಾತ್ರಿ ಹಾಗೂ ಅಂಬಿನೋತ್ಸವ ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next