Advertisement

Dussehra elephant Mahendra: ನಿರ್ಲಕ್ಷ್ಯಕ್ಕೊಳಗಾದನೇ ದಸರಾ ಆನೆ ಮಹೇಂದ್ರ?

12:24 PM Sep 01, 2024 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನಂತರ ಅಂಬಾರಿ ಹೊರುವ ಎಲ್ಲಾ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಿದ್ದ ಮಹೇಂದ್ರ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ಇಲಾಖೆಯೊಳಗಿನ ಗುಂಪುಗಾರಿಕೆಯೇ ಆತನಿಗೆ ಮುಳುವಾಯ್ತೆ ಎಂಬ ಅನುಮಾನ ವ್ಯಕ್ತವಾಗಿದೆ.

Advertisement

ಹೌದು… ಪುಂಡಾನೆ ಸೆರೆ ಕಾರ್ಯಾಚಣೆಯಲ್ಲಿ ಸೆರೆ ಸಿಕ್ಕ ಬಳಿಕ ಮೂರೆ ವರ್ಷದಲ್ಲಿ (2022) ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಿಟ್ಟಿಸಿಕೊಂಡಿದ್ದ 41 ವರ್ಷದ ಮಹೇಂದ್ರ ಆನೆ ಎಲ್ಲರ ಗಮನ ಸೆಳೆದಿದ್ದ. ಮೊದಲ ವರ್ಷವೇ ಶ್ರೀರಂಗಪಟ್ಟಣ ದಸರಾ ಉತ್ಸವದಲ್ಲಿ ಭಾಗವಹಿಸಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದು, ಮಾತ್ರವಲ್ಲದೇ ಗೋಪಾಲಸ್ವಾಮಿ ಆನೆಯ ಸಾವಿನಿಂದ ತೆರವಾಗಿದ್ದ ಚಿನ್ನದ ಅಂಬಾರಿ ಹೊರುವ ಉತ್ತರಾಧಿಕಾರಿ ಸ್ಥಾನವನ್ನು ತುಂಬಿದ್ದ.

ಇದು ಅರಣ್ಯ ಅಧಿಕಾರಿಗಳಿಗೆ ಭರವಸೆ ಮೂಡಿಸಿದ್ದಲ್ಲದೇ, ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿಯೂ ಗುರುತಿಸಿಕೊಂಡಿತ್ತು. ನಂತರ 2023ರ ದಸರಾ ಉತ್ಸವದಲ್ಲೂ ಪಾಲ್ಗೊಂಡು ಎಲ್ಲರ ಗಮನ ಸೆಳೆದಿತ್ತು. ಆದರೆ, ಇಲಾಖೆಯೊಳಗಿನ ‌ ಸಿಬ್ಬಂದಿಯ ಗುಂಪುಗಾರಿಕೆಯ ಪರಿಣಾಮ ಈ ಬಾರಿಯ ದಸರಾ ಉತ್ಸವದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸಂಪೂರ್ಣವಾಗಿ ಕಡೆಗಣಿಸುವ ಪ್ರಯತ್ನ: 2023ರ ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಮಹೇಂದ್ರ ಆನೆ ಅಭಿಮನ್ಯು ನಂತರದ ಸ್ಥಾನ ತುಂಬುವವನು ನಾನೇ ಎಂದು ಸಾರಿದ್ದ. ಜತೆಗೆ ಈ ಆನೆಯ ಮಾವುತ ರಾಜಣ್ಣ ಹಾಗೂ ಕಾವಾಡಿ ಮಲ್ಲಿಕಾರ್ಜುನ ನಾಯತ್ವಗುಣದಿಂದ ಇಡೀ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಇದನ್ನು ಸಹಿಸದ ಕೆಲವರು ಹಿಂದಿನ ಡಿಸಿಎಫ್ ಅವರಿಗೆ 2024ರ ದಸರೆಗೆ ಮಹೇಂದ್ರನನ್ನು ಕರೆತರ ದಂತೆ ಪತ್ರಪಬರೆದಿದ್ದರು. ಆದರೆ, ಮಹೇಂದ್ರನ ಸಾಮರ್ಥ್ಯ ಅರಿತಿದ್ದ ಅರಣ್ಯಾಧಿಕಾರಿಗಳು ಮೊದಲ ತಂಡದ ಬದಲಿಗೆ ಎರಡನೇ ತಂಡದಲ್ಲಿ ಮಹೇಂದ್ರನನ್ನು ಕರೆತರುತ್ತಿದ್ದಾರೆ. ಈ ಮೂಲಕ ಆನೆಯನ್ನೂ ಸಂಪೂರ್ಣವಾಗಿ ಕಡೆಗಣಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

Advertisement

ಯಾರು ಮಹೇಂದ್ರ?:

2015-2016ರ ವೇಳೆಯಲ್ಲಿ ರಾಮನಗರದ ಭಾಗದ ಜನರಿಗೆ ತಲೆ ನೋವಾಗಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಆ ಭಾಗದ ರೈತರಾದಿಯಾಗಿ ಜನಪ್ರತಿನಿಧಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಧಿಯಿಲ್ಲದೆ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಮಹೇಂದ್ರನನ್ನು ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದು ನಾಗರಹೊಳೆಯ ಮತ್ತಿಗೋಡು ಶಿಬಿರಕ್ಕೆ ಕರೆತಂದು ಪಳಗಿಸಿ ಮಹೇಂದ್ರ ಎಂಬ ಹೆಸರಿಡಲಾಯಿತು. ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಮೊದಲಿಗೆ ವಿನೋದ್‌ ರಾಜ್‌ ಎಂಬಾತ ನೀಡಿದ ಅತ್ಯುತ್ತಮ ತರಬೇತಿಯಿಂದಾಗಿ ಆರೇಳು ತಿಂಗಳಲ್ಲೇ ಮೃದು ಸ್ವಭಾದ ಆನೆಯಾಗಿ ಮಾರ್ಪಟ್ಟಿದ್ದು ವಿಶೇಷ. ಸದ್ಯಕ್ಕೆ 2.75 ಮೀ. ಎತ್ತರ, 4600 ಕೆ.ಜಿ. ಇರುವ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತರು ನೋಡಿಕೊಳ್ಳುತ್ತಿದ್ದಾನೆ. ಎಷ್ಟು ಸೌಮ್ಯ ಸ್ವಭಾ ವವೋ ಅಷ್ಟೇ ಧೈರ್ಯಶಾಲಿ ಮತ್ತು ದಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಮಾವುತ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುವವನಾಗಿದ್ದಾನೆ. ಜತೆಗೆ ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯೂ ಆಗಿದ್ದಾನೆ.

ಶ್ರೀರಂಗಪಟ್ಟಣ ದಸರಾ ಯಶಸ್ವಿಯಾಗಿ ನಿಭಾಯಿಸಿದ್ದ ಮಹೇಂದ್ರ:  ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಮೊದಲ ವರ್ಷವಾದ 2022 ಹಾಗೂ ನಂತರದ ವರ್ಷ 2023ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ, ನಾನೂ ಮೈಸೂರಿನ ರಾಜಮಾರ್ಗದಲ್ಲಿ ಚಿನ್ನದ ಅಂಬಾರಿ ಹೊರಲು ಸಮರ್ಥನಿದ್ದೇನೆ ಎಂಬ ಸಂದೇಶ ಸಾರಿದ್ದ. ಆದರೆ, ಇಂತಹ ಸರ್ವಗುಣ ಸಂಪನ್ನನಾದ ಮಹೇಂದ್ರನನ್ನು ಅರಣ್ಯ ಇಲಾಖೆ ಕಡೆಗಣಿಸಿರುವುದು ಆನೆ ಪ್ರಿಯರಲ್ಲಿ ಅಸಮಾಧಾನ ತರಿಸಿದೆ.

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next