ಪಶ್ಚಿಮ ಘಟ್ಟವೇ ಒಂದು ನಿಸರ್ಗ ಸಹಜ ಗ್ಯಾಲರಿಯಾಗಿದ್ದು ಅಲ್ಲಿ ಪ್ರತಿಯೊಂದು ದೃಶ್ಯಕ್ಕೂ ಅಗೋಚರವಾದ ಕಲಾತ್ಮಕ ಚೌಕಟ್ಟಿದೆ. ಕಾಣುವ ಕಣ್ಣು, ಗ್ರಹಿಸುವ ಮನಸ್ಸಿದ್ದರೆ ಪಶ್ಚಿಮಘಟ್ಟದ ಎಲ್ಲ ದೃಶ್ಯಗಳೂ ಕಲಾತ್ಮಕ ಸೌಂದರ್ಯದ ವಿವಿಧ ಆಯಾಮಗಳನ್ನು ತೆರೆದು ತೋರಿಸುತ್ತವೆ. ಗಿರಿಗಳನ್ನು ಚುಂಬಿಸುವ ಶ್ವೇತ ಮೇಘ ಮಾಲೆ, ಮುಂಜಾನೆಯ ಇಬ್ಬನಿ ದಿಬ್ಬಣ, ಗಾಳಿಗೆ ಮಂಜು ಸಂಚರಿಸುತ್ತಾ ಮಸುಕಾಗಿದ್ದ ಗಿರಿಗಳು ನಿಧಾನಕ್ಕೆ ಕಡು ಹಸಿರು ಬಣ್ಣಕ್ಕೆ ಬದಲಾವಣೆಯಾಗುವುದನ್ನು ಕಂಡರೆ ನಿಸರ್ಗದ ಕಾಣದ ಕುಂಚವು ಬೃಹತ್ ಕ್ಯಾನ್ವಾಸ್‌ನಲ್ಲಿ ರಚಿಸುವ ಚಿತ್ರಗಳು ದಿಗೂಢರನ್ನಾಗಿಸುತ್ತವೆ.
ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರು ತಮ್ಮ ವರ್ಣಕುಂಚಗಳನ್ನು ಬೆನ್ನಿಗೇರಿಸಿ ಹೊರಟದ್ದು ಪಶ್ಚಿಮಘಟ್ಟದ ಚಾರ್ಮಾಡಿಘಾಟಿಯ ತುತ್ತತುದಿಯ ಅಲೇಖಾನ ಹೊರಟ್ಟಿ ಅರಣ್ಯ ಪ್ರದೇಶಕ್ಕೆ. ಕಾಫಿ ತೋಟದ ಘಮವನ್ನು ಶೋಧಿಸಿ ಅಡವಿ ಯೊಳಗಿನ ಚಳಿಯನ್ನು ಭೇದಿಸಿ ಕಾನನದಾಚೆಯ ಪುಟ್ಟಹಳ್ಳಿ ಹೊರಟ್ಟಿಗೆ ಬಂದಾಗ ಸೂರ್ಯನು ಕಿರಣಗಳನ್ನು ಚಾಚುತ್ತಾ ನಮ್ಮನ್ನು ವೀಕ್ಷಿಸುತ್ತಿದ್ದ. ಆ ದೃಶ್ಯಗಳನ್ನು ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿಯಬೇಕೆಂದು ಹೊರಟ ಚಾವಡಿಯ 22 ಕಲಾವಿದರು ಹೊರಟ್ಟಿಯ ಮನೋಹರವಾದ ಕಣಿವೆ ದೃಶ್ಯಗಳನ್ನು ಆಗಲೇ ಮನಸ್ಸಿನೊಳಗೆ ತುಂಬಿಕೊಂಡಿದ್ದರು.
ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ತಮ್ಮ ಜಲ ವರ್ಣದ ಚಮತ್ಕಾರದೊಂದಿಗೆ ಅಲ್ಲಿನ ಕಾನನ ದೃಶ್ಯಗಳನ್ನು ತಮ್ಮ ಕುಂಚ – ಕ್ಯಾನ್ವಾಸ್‌ನಲ್ಲಿ ಸೆರೆ ಹಿಡಿದರು. ಜತೆಯಲ್ಲೇ ಕಮಾಲ್ ಅವರು ಕಾಫಿ ತೋಟ, ಕಾನನ ದೊಂದಿಗೆ ಬೆರೆತ ಮರಗಿಡಗಳನ್ನು ಚಿತ್ರಿಸಿದರು. ತಿಲಕ್‌ರಾಜ್ ಅಡವಿಯ ನಡುವೆ ಇರುವ ಮುರುಕಲು ಮನೆ, ಹರಕಲು ಬೇಲಿಯ ದೃಶ್ಯಗಳನ್ನು ಸೆರೆಹಿಡಿದರೆ, ಸುಧೀರ್ ಕಾವೂರು ಕಾಡಿನ ಹಾಡಿಯಲ್ಲಿ ನೆರಳು ಬೆಳಕಿನ ಸಂಗಮ ವನ್ನು ಸಾದರ ಪಡಿಸಿದರು. ವೀಣಾ ಮಧುಸೂದನ್ ಕಾಫಿ ತೋಟದ ಹಸಿರು ಎಲೆಗಳ ನಡುವೆ ಅರಳಿದ ಕೆಂಪು ಹೂವಿನ ಕಂಪನ್ನು ಚಿತ್ರಿಸಿದರೆ ವಿದ್ಯಾ ಕಾಮತ್ ಕಾಫಿ ಕಣಿವೆಯ ನಡುವಿನ ಅಂಶುಧರನನ್ನು, ನವೀನ್ ಕೋಡಿಕಲ್ ಘಟ್ಟದ ಕಂದರವನ್ನು ಚಿತ್ರಿಸಿದರು. ಯುವ ಕಲಾವಿದ ಡೆಸ್ಮಂಡ್ ಹಳ್ಳಿಯ ಹಳ್ಳದ ಒಪ್ಪ ಓರಣವನ್ನು ಬರೆದರು.
ಕಾನನದ ಹೂರಣವನ್ನು ಬಣ್ಣಗಳಲ್ಲಿ ಹಿಡಿದಿರಿಸುವ ಪ್ರಯತ್ನ ಮಾಡಿದ ಕರಾವಳಿ ಚಿತ್ರ ಕಲಾ ಚಾವಡಿಯ ಈ “ವನನಿನಾದ ಕಲಾ ಶಿಬಿರ’ವು ಪಶ್ಚಿಮ ಘಟ್ಟದ ದೃಶ್ಯಾವಳಿಗಳಲ್ಲಿರುವ ರಮಣೀಯತೆಯನ್ನು ಅಭಿವ್ಯಕ್ತಪಡಿಸಿತ್ತು. ಹೊರಟ್ಟಿ ಕಾನನ ಕಣಿವೆಯ ಸುಂದರ ದೃಶ್ಯಗಳು ಮಾತ್ರವಲ್ಲ, ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗ ದವರ ರೋಚಕ ಬದುಕು ಕೂಡ ಕಲಾವಿದರ ಕಲಾಕೃತಿಗಳಿಗೆ ಆಹಾರವಾದವು.
ದಿನೇಶ್ ಹೊಳ್ಳ