ಕೋಲ್ಕತಾ : ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಭಾನುವಾರ ರಾಮನವಮಿ ವಿಷಯವಾಗಿ ಬಿಜೆಪಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಹಿಂಸಾಚಾರ ನಡೆದಿದೆ. ಈ ವಾರದ ಆರಂಭದಲ್ಲಿ ಹೌರಾದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿದ್ದವು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಇಂದು ‘ರಾಮ ನವಮಿ ಶೋಭಾ ಯಾತ್ರೆ’ಯಲ್ಲಿ ಭಾಗವಹಿಸಿದ್ದರು. ಮೆರವಣಿಗೆ ವೇಳೆ ಕಲ್ಲು ತೂರಾಟದ ನಡುವೆ ಜನರು ಸುರಕ್ಷತೆಗಾಗಿ ಓಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಇಂದು ರಾತ್ರಿ ಆರೋಪ ಹೊರಿಸಿ ಜೈಲಿಗೆ ಹಾಕಲಾಗುವುದು ಎಂದು ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಹೇಳಿದ್ದಾರೆ. ಇಂದು ರಾತ್ರಿಯೇ ತಪ್ಪಿತಸ್ಥರ ವಿರುದ್ಧ ಆರೋಪ ಹೊರಿಸಲಾಗುವುದು ಮತ್ತು ಕಂಬಿ ಹಿಂದೆ ಹಾಕಲಾಗುವುದು. ನಾವು ನಿರ್ಧರಿಸಿದ್ದೇವೆ. ಈ ರೀತಿಯ ಗೂಂಡಾಗಿರಿಯು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ತಡೆಯುತ್ತದೆ ಎಂದು ಬೋಸ್ ಹೇಳಿದ್ದಾರೆ.
ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ. ಬಿಜೆಪಿ ಶೋಭಾ ಯಾತ್ರೆ ಮೇಲೆ ಹೂಗ್ಲಿಯಲ್ಲಿ ದಾಳಿ ನಡೆದಿದೆ. ಕಾರಣ ಸರಳ ಮತ್ತು ಸ್ಪಷ್ಟವಾಗಿದೆ. ಮಮತಾ ಬ್ಯಾನರ್ಜಿ ಹಿಂದೂಗಳನ್ನು ದ್ವೇಷಿಸುತ್ತಾರೆ ಎಂದು ಮಜುಂದಾರ್ ಟ್ವೀಟ್ ಮಾಡಿದ್ದಾರೆ.
ಸುಕಾಂತಾ ಮಜುಂದಾರ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಹಿಂಸಾಚಾರದ ಕುರಿತು ಪತ್ರ ಬರೆದಿದ್ದು, ತತ್ ಕ್ಷಣದ ನೆರವು ಕೋರಿದ್ದಾರೆ.
ಹೂಗ್ಲಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಹೌರಾದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆಯಿಂದಲೇ ಸಂಚಾರ ಆರಂಭಗೊಂಡಿದ್ದರಿಂದ ಅಂಗಡಿ, ಮಾರುಕಟ್ಟೆಗಳು ತೆರೆದಿದ್ದವು.