Advertisement

ದುರ್ಗಾ ವಿಸರ್ಜನ ಮೆರವಣಿಗೆ: ದೀದಿಗೇಕೆ ರೇಜಿಗೆ?

10:44 AM Sep 27, 2017 | |

ಈ ತಿಂಗಳ 30ರಂದು ಹಾಗೂ ಅಕ್ಟೋಬರ್‌ 1ರಂದು ದುರ್ಗಾ ವಿಗ್ರಹಗಳನ್ನು ಜಲಸ್ತಂಭನಗೊಳಿಸುವುದಕ್ಕೆ ನಿರ್ಬಂಧ ಹೇರಿರುವ ಪಶ್ಚಿಮ ಬಂಗಾಲ ಸರ್ಕಾರ‌ದ ಆದೇಶವನ್ನು ಅನೂರ್ಜಿತಗೊಳಿಸಿ ಕಲ್ಕತಾ ಉಚ್ಚನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಸಿಟ್ಟು -ಸೆಡವಿನ ಪ್ರತಿಕ್ರಿಯೆ, ಅವರಂಥ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಶೋಭಿಸುವಂಥದ್ದಲ್ಲ. ಮಮತಾ ಬ್ಯಾನರ್ಜಿಯವರ ಕೋಪೋದ್ರೇಕ, ಉದ್ಧಟತನ ಹಾಗೂ ಅಸಹನೆಯ ಭಾಷೆಯ ಬಳಕೆ ಎಲ್ಲರಿಗೂ ತಿಳಿದಿರುವುದೇ. ಈಗ ಆಕೆ “”ನಾನು ಇಂಥದನ್ನೇ ಮಾಡಬೇಕೆಂದು ಹೇಳಲು ಯಾರಿಗೂ ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಆಕೆಯ ಸರ್ವಾಧಿಕಾರಿ ಗುಣ ಹಾಗೂ ನ್ಯಾಯಾಲಯಗಳೆಡೆಗಿನ ತಾತ್ಸಾರ ಸ್ಪಷ್ಟವಾಗಿ ಪ್ರಕಟವಾಗಿವೆ. ದುರ್ಗಾ ವಿಸರ್ಜನೆಯ ದಿನವಾದ ಸೆಪ್ಟೆಂಬರ್‌ 30ರ ರಾತ್ರಿ 10 ಗಂಟೆಯ ಬಳಿಕ, ಹಾಗೂ ಅದರ ಮರುದಿನ, ಅಕ್ಟೋಬರ್‌ 1ರಂದು ಇಡೀ ಹಗಲಲ್ಲಿ, ಕೊಲ್ಕತ್ತಾದಲ್ಲಾಗಲಿ, ರಾಜ್ಯದ ಯಾವುದೇ ಇತರ ಕಡೆಗಳಲ್ಲಾಗಲಿ ದುರ್ಗಾಪ್ರತಿಮೆಗಳ ಜಲಸ್ತಂಭನ ಕಾರ್ಯ ನಡೆಸುವುದಕ್ಕೆ ನಿಷೇಧ ಹೇರಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಕಲ್ಕತ್ತಾ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಗುರುವಾರದಂದು ಆದೇಶ ಹೊರಡಿಸಿ ಸರ್ಕಾರದ ಮೇಲ್ಕಂಡ ಆದೇಶವನ್ನು ರದ್ದು ಪಡಿಸಿತ್ತು. ಈ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮುಸ್ಲಿಮರು ಮೊಹರಂ ಪ್ರಯುಕ್ತ ದುಃಖಾಚರಣೆಯಲ್ಲಿ ನಿರತರಾಗಿರುತ್ತಾರೆಂಬ ಕಾರಣದಿಂದ ಈ ಆದೇಶವನ್ನು ಹೊರಡಿಸುತ್ತಿರುವುದಾಗಿ ಸರಕಾರ ಹೇಳಿತ್ತು.

Advertisement

ಮಮತಾ ಬ್ಯಾನರ್ಜಿ ಎಂಬ ಜನನಾಯಕಿ ರಸ್ತೆಗಿಳಿದು ಆಂದೋಲನ ನಡೆಸುತ್ತಾ ಬಂದವರು. ಮುಂದೆ ಕೇಂದ್ರಮಂತ್ರಿ ಪದವಿ, ಮುಖ್ಯಮಂತ್ರಿ ಹುದ್ದೆ ಮುಂತಾದ ಅಧಿಕಾರಗಳನ್ನು ಪಡೆದರು. ಅವರ ರಾಜಕೀಯ “ದಾಖಲೆ’ಗಳನ್ನು ಬಲ್ಲ ಯಾರಿಗೂ ಅವರ ಈಗಿನ ನಡೆಯಿಂದ ಆಶ್ಚರ್ಯವಾಗಿಲ್ಲ. ಶುದ್ಧಾಂಗ ದುರಹಂಕಾರ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಾರ್ಥ ಕಲ್ಪಿಸುವ ಗುಣ – ಇವೇ ಆಕೆಯ ವೃತ್ತಿ ಜೀವನದ ಲಾಂಛನಗಳು. ಆಕೆಗಿಂತ ಮೊದಲು ರಾಜ್ಯದಲ್ಲಿ ಡಾ| ಪಿ.ಸಿ. ಘೋಷ್‌, ಡಾ| ಬಿಧಾನ್‌ಚಂದ್ರ ರಾಯ್‌, ಪ್ರಫ‌ುಲ್ಲಚಂದ್ರ ಸೇನ್‌, ಸಿದ್ಧಾಂತ ಶಂಕರ ರಾಯ್‌ ಅಥವಾ ಜ್ಯೋತಿ ಬಸು ಮುಂತಾದ ಶ್ರೇಷ್ಠ ವ್ಯಕ್ತಿತ್ವದ ಭಾರತೀಯರು ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ಬಹುಶಃ ಆಕೆಯ ವ್ಯಕ್ತಿಪೂಜಕ ಬೆಂಬಲಿಗರು ಆಕೆಗೆ ನೆನಪು ಮಾಡಿ ಕೊಟ್ಟಿಲ್ಲವೇನೋ. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಕೂಡ ಅವಿಭಜಿತ ಬಂಗಾಲದಲ್ಲಿ ಓರ್ವ ಮುಖ್ಯಮಂತ್ರಿಯಾಗಿ ಪರಿವರ್ತಿತರಾದ ಶ್ರೇಷ್ಠ ಗಣಿತಜ್ಞರೊಬ್ಬರಿದ್ದರು. ಅವರೇ, ವಿಭಜಿತ ಮುಸ್ಲಿಂಲೀಗ್‌ ಬಣದ ನಾಯಕ ಎ.ಕೆ. ಫ‌ಜಲ್‌ ಹಖ್‌. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚಿಸುವ ವಿಚಾರದಲ್ಲಿ ಹಖ್‌ ಅವರು ಹಿಂದೂ ಮಹಾಸಭಾದ ನಾಯಕ, ಶ್ಯಾಮ ಪ್ರಸಾದ್‌ ಮುಖರ್ಜಿಯವರೊಂದಿಗೆ ಕೈ ಜೋಡಿಸಲು ಹಿಂದೇಟು ಹಾಕಲಿಲ್ಲ. ತಮ್ಮ ಹಿಂದಿನ ಮುಖ್ಯಮಂತ್ರಿಗಳು ಶೈಕ್ಷಣಿಕ ವೃತ್ತಿಸಂಬಂಧಿ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಸಾಧನೆ ಗೈದವರಾಗಿದ್ದರೆ, ಮಮತಾ ತಾನು ಕೂಡ ಡಾಕ್ಟರೇಟ್‌ ಪದವೀಧರೆ, ಅದರಲ್ಲೂ (ಅಸ್ತಿತ್ವದಲ್ಲೇ ಇಲ್ಲದ) ಈಸ್ಟ್‌ ಜಾರ್ಜಿಯಾ ವಿ.ವಿ.ಯಿಂದ ದೊರೆತಿರುವ ಡಾಕ್ಟರೇಟ್‌ ಎಂದೇ ಹೇಳಿಕೊಂಡು ತಿರುಗಿದರು. ಅಷ್ಟಕ್ಕೂ ಆಕೆಗೂ, ಆಕೆಯ ಹಿಂದಿನ ಮೊದಲ ನಾಲ್ವರು ಮುಖ್ಯಮಂತ್ರಿಗಳಾದ ಘೋಷ್‌, ರಾಯ್‌, ಸೇನ್‌ ಹಾಗೂ ಅಜಯ್‌ ಮುಖರ್ಜಿಗೂ ಇರುವ ಸಾಮ್ಯವೆಂದರೆ ಮಮತಾ ಕೂಡ ಇವರಂತೆಯೇ ಅವಿವಾಹಿತರು. ಮಮತಾಗೆ ಪಶ್ಚಿಮ ಬಂಗಾಲದಲ್ಲಿ ಅಗಾಧ ಜನಪ್ರಿಯತೆಯಿದೆ ಎಂದು ವಾದಿಸುವವರೂ ಇರಬಹುದು. ಆದರೆೆ, ರಾಜ್ಯದ ಜನರು 34 ವರ್ಷಗಳ ವಾಮರಂಗದ ಆಡಳಿತದಿಂದ ಬೇಸತ್ತು ತೃಣಮೂಲ ಕಾಂಗ್ರೆಸ್‌ಗೆ ಮತ ಹಾಕಿದರು. ತಪ್ಪು ಜನರನ್ನು ಆಯ್ಕೆ ಮಾಡುವಲ್ಲಿ ನಮ್ಮ ಜನರು ದೊಡ್ಡ ದಾಖಲೆಯನ್ನೇ ಮಾಡಿದ್ದಾರೆ ಎಂಬುದನ್ನು ನಾವು ಮರೆಯ ಕೂಡದು! 

ತುಷ್ಟೀಕರಣ ರಾಜಕೀಯ!: ಮಮತಾ ಬ್ಯಾನರ್ಜಿಗೆ ಸಂಬಂಧಿಸಿದ ಮುಖ್ಯ ಸಮಸ್ಯೆಯೆಂದರೆ, ಆಕೆ ವೋಟ್‌ ಬ್ಯಾಂಕ್‌ ಲೆಕ್ಕಾಚಾರವನ್ನು ಮನಸ್ಸಿನಲ್ಲಿರಿಸಿಕೊಂಡು ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಸಂತೋಷ ಪಡಿಸಲು (ಸಂತುಷ್ಟಿಗೊಳಿಸಲು ಎನ್ನಿ) ಬಯಸುತ್ತಾರೆ. ರಾಜ್ಯದಲ್ಲಿರುವ ಜನಸಂಖ್ಯೆಯ ಪೈಕಿ ಮುಸ್ಲಿಮರು ಶೇ. 27ರಷ್ಟಿದ್ದಾರೆ. ದುರ್ಗಾ ವಿಗ್ರಹಗಳ ಜಲಸ್ತಂಭನಕ್ಕೆ ಆಕೆ ನಿರ್ಬಂಧ ಹೇರಿದ್ದು, ಮೊಹರಂ ಸಂದರ್ಭದಲ್ಲಿ ಮುಸ್ಲಿಮರನ್ನು ಖುಷಿಪಡಿಸೋಣವೆಂಬ ಉದ್ದೇಶದಿಂದಲೇ ಎಂಬುದು ಅರ್ಥವಾಗುತ್ತದೆ. ರಾಜ್ಯದಲ್ಲಿರುವ ಹಿಂದೂಗಳಿಗೆ ದುರ್ಗಾಪೂಜೆ ದೊಡ್ಡ ಹಬ್ಬ; ಅವರ ಭಾವನೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ವಿಗ್ರಹ ವಿಸರ್ಜನ ಮೆರವಣಿಗೆಗಳಿಗೆ ನಿರ್ಬಂಧ ಹೇರಿದ್ದಾರೆ. ಒಂದು ರೀತಿಯಲ್ಲಿ ಕಮ್ಯುನಿಸ್ಟರು ಮತ್ತವರ ಮಿತ್ರ ಪಕ್ಷಗಳ ನಾಯಕರಿಗಿಂತಲೂ ಮಮತಾ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ. ಕಮ್ಯುನಿಸ್ಟ್‌ ಪಕ್ಷಗಳ ಅಥವಾ ಅವುಗಳ ಮಿತ್ರಪಕ್ಷಗಳ ನಾಯಕರು ಅಧಿಕಾರದಲ್ಲಿದ್ದಾಗ, ಎಂದೂ ಹೀಗೆ ಮೆರವಣಿಗೆಗಳ ಮೇಲೆ ನಿರ್ಬಂಧ ಹೇರಲಿಲ್ಲ. ಮಮತಾ ಮತ್ತು ಆಕೆಯ ಟಿಎಂಸಿ ಅಧಿಕಾರಕ್ಕೆ ಬಂದ ಮೇಲೆ ಕ್ಯಾಲೆಂಡರೇನೂ ಬದಲಾಗಿಲ್ಲ. ಮುಖ್ಯಮಂತ್ರಿಯಾದ ಬಳಿಕ ಆಕೆ ತೆಗೆದುಕೊಂಡಿರುವ ಹೆಚ್ಚಿನ ನಿರ್ಧಾರಗಳ ಉದ್ದೇಶ, ರಾಜ್ಯದಲ್ಲಿ ಕೊಂಚ ಮಟ್ಟಿಗೆ ಅಸ್ತಿತ್ವವನ್ನು ಸಂಪಾದಿಸಿಕೊಂಡು ಕಲರವ ಎಬ್ಬಿಸುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯುವುದೇ ಆಗಿದೆ.

ರಾಜ್ಯಕ್ಕೆ ಬಾಂಗ್ಲಾದೇಶದಿಂದ ಮುಸ್ಲಿಂ ನಿರಾಶ್ರಿತರು ಪ್ರವೇಶ ಮಾಡುತ್ತಲೇ ಇದ್ದಾರೆ. ಮಮತಾ ಈ ವಿಷಯದಲ್ಲಿ ಜಾಣಗುರುಡುತನ ಪ್ರದರ್ಶಿಸುತ್ತಿದ್ದಾರೆ. ಮ್ಯಾನ್ಮಾರ್‌ನಿಂದ ರೊಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ದೇಶದಿಂದ ಹೊರಗೆ ಕಳುಹಿಸಬೇಕೆಂಬ ಮೋದಿ ಸರ್ಕಾರದ ನಿಲುವಿಗೆ ಆಕೆಯ ವಿರೋಧವಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಹಾಗೂ ಅದರ ಜೋರ್ಡಾನಿನ ಪಕ್ಷಪಾತಿ ಹೈಕಮಿಶನರ್‌, ಯುವರಾಜ ಜೈದ್‌ಬಿನ್‌ ರಾದ್‌ ಅವರ ನಿಲುವಿಗೆ ಮಮತಾರ ಬೆಂಬಲವಿದೆ! ರೊಹಿಂಗ್ಯಾಗಳು ಭಯೋತ್ಪಾದಕರಲ್ಲ; ಅವರು ಸಾಮಾನ್ಯ ಜನರು ಎನ್ನುವುದು ಮಮತಾ ವಾದ. ಈಚಿನ ತಿಂಗಳುಗಳಲ್ಲಿ ಬಸೀರ್‌ ಹಾಟ್‌ನಲ್ಲಿ ಕ್ರಿಮಿನಲ್‌ ನಿರಾಶ್ರಿತರು ಭುಗಿಲೆಬ್ಬಿಸಿದ ಹಿಂಸೆಗೆ ಕೇಂದ್ರವೇ ಕಾರಣ, ದಂಗೆಯ ಹಿಂದೆ ಕೇಂದ್ರ ಸರಕಾರವಿದೆ ಎಂದು ಆಕೆ ಕೋಪಗೊಂಡು ಕೂಗಾಡಿದ್ದಾರೆ. ರಾಜ್ಯದ ಡಾರ್ಜಿಲಿಂಗ್‌ ಮತ್ತಿತರ ಭಾಗಗಳಲ್ಲಿ ಗೂರ್ಖಾಗಳು ಆಕೆಯ ಸರ್ಕಾರದ ವಿರುದ್ಧ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ.

ಮಮತಾರ ಇಂಥ ನೇತ್ಯಾತ್ಮಕ ಸ್ವಭಾವ ಹಾಗೂ ಸಂಕುಚಿತ ಪ್ರಾಂತೀಯ ಮನೋಭಾವ, ರಾಷ್ಟ್ರೀಯ ಸಮಸ್ಯೆ/ ವಿವಾದಗಳ ಸಂದರ್ಭದಲ್ಲೂ ತಪ್ಪದೆ ಪ್ರಕಟವಾಗುತ್ತದೆ. ಯುಪಿಎ ಸರ್ಕಾರವಿದ್ದಾಗಲೂ ಆಕೆ ಮಾಡಿದ್ದು ಇದನ್ನೇ. 2011ರಲ್ಲಿ ತೀಸ್ತಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೊಂದಿಗೆ ಒಪ್ಪಂದ ಏರ್ಪಡಿಸಿಕೊಳ್ಳುವ ಪ್ರಸ್ತಾವವನ್ನು ಭಗ್ನಗೊಳಿಸಿದ ಅಪಕೀರ್ತಿ ಆಕೆಗೆ ಸಲ್ಲುತ್ತದೆ. ಕೊನೆಯ ಕ್ಷಣದಲ್ಲಿ ಆಕೆ, ಢಾಕಾಕ್ಕೆ ಹೊರಟಿದ್ದ ಪ್ರಧಾನಿಯ ನಿಯೋಗದೊಂದಿಗೆ ಸೇರಿಕೊಳ್ಳಲು ನಿರಾಕರಿಸಿದರು. ಅಷ್ಟರಲ್ಲಾಗಲೇ ಬಾಂಗ್ಲಾದೊಂದಿಗಿನ ಕರಡು ಒಪ್ಪಂದಕ್ಕೆ ಇಕ್ಕಡೆಗಳ ಸಮ್ಮತಿ ಸೂಚಕ ಸಹಿ ಬಿದ್ದಾಗಿತ್ತು. ಪಶ್ಚಿಮ ಬಂಗಾಲ ಹಾಗೂ ಬಾಂಗ್ಲಾ ದೇಶದ 16 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುವ ಸಲುವಾಗಿ ಅಣೆಕಟ್ಟುಗಳನ್ನು ನಿರ್ಮಿಸುವ ಬಗೆಗಿನ ಒಪ್ಪಂದ ಇದಾಗಿತ್ತು. ತೀಸ್ತಾ ನದಿಯಲ್ಲಿ ಸಾಕಷ್ಟು ನೀರೇ ಇಲ್ಲ ಎನ್ನುವುದು ಮಮತಾ ಅವರ ವಾದವಾಗಿತ್ತು. ಸರ್ಕಾರದಲ್ಲಿ ಪ್ರಮುಖ ಭಾಗೀದಾರ ಪಕ್ಷವಾಗಿದ್ದ ತೃಣಮೂಲವನ್ನು ಎದುರುಹಾಕಿಕೊಳ್ಳುವ ಎದೆಗಾರಿಕೆ ಯುಪಿಎಗೆ ಇರಲಿಲ್ಲ. ಇಂದಿಗೂ ತೀಸ್ತಾ ಒಪ್ಪಂದಕ್ಕೆ ಸಹಿಬಿದ್ದಿಲ್ಲ. ತನ್ನ ರಾಜ್ಯದಲ್ಲಿ ನಡೆಯಲಿದ್ದ ತಾಲೂಕು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕೆ ಯುಪಿಎ ಸರಕಾರದಿಂದ ತನ್ನ ಬೆಂಬಲವನ್ನು ಹಿಂದೆಗೆದುಕೊಂಡರು. ಯುಪಿಎ ಚಿಲ್ಲರೆ ವ್ಯಾಪಾರದಲ್ಲಿ ನೇರ ವಿದೇಶೀ ಹೂಡಿಕೆಗೆ ಅವಕಾಶ ನೀಡಿದ್ದು ಸರಿಯಲ್ಲ ಎಂಬ ನೆಪವೊಡ್ಡಿ ಬೆಂಬಲ ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದರು. ಕೇಂದ್ರದಲ್ಲಿ ರೈಲ್ವೇ ಸಚಿವೆಯಾಗಿದ್ದಾಗ ಆಕೆಯ ಗಮನ ಕೇವಲ ಪಶ್ಚಿಮ ಬಂಗಾಲದ ಮೇಲಷ್ಟೇ ಕೇಂದ್ರೀಕೃತವಾಗಿತ್ತು. ಸಿಂಗೂರ್‌ನಲ್ಲಿ ಟಾಟಾ ನ್ಯಾನೋ ಯೋಜನೆಗಾಗಿ, ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಯೋಜನೆಗಾಗಿ ಭೂ ಸ್ವಾಧೀನ ನಡೆದದ್ದನ್ನು ವಿರೋಧಿಸಿ ಹಿಂಸಾತ್ಮಕ ಚಳವಳಿಗಳನ್ನು ನಡೆಸುವ ಮೂಲಕ ಆಕೆ ಅಧಿಕಾರಕ್ಕೆ ಬಂದರು. ಹೀಗೆ ಹಿಂಸಾತ್ಮಕ ಆಂದೋಲನಗಳ ಮೂಲಕ ಅಧಿಕಾರ ಹಿಡಿಯುವುದರೊಂದಿಗೆ ಮಾರ್ಕ್ಸಿಸ್ಟರ ಆಡಳಿತವೇನೋ ಅಂತ್ಯಕಂಡಿತು. ಆದರೆ ಈಗ ಇದೇ (ಭೂ ಸ್ವಾಧೀನಕ್ಕೆ ಸಂಬಂಧಿಸಿದ) ಸೂಕ್ಷ್ಮ ವಿವಾದವನ್ನಾಕೆ ಎದುರಿಸುತ್ತಿದ್ದಾರೆ. 

Advertisement

ಪಾಕ್‌ನಲ್ಲೊಬ್ಬ ಭಾರತದ ಮಿತ್ರ!: ಈಗ ಪೂರ್ವದಿಂದ ಪಶ್ಚಿಮದತ್ತ ಹೊರಳಿದರೆ, ಅಲ್ಲೊಬ್ಬ ಭಾರತದ ಮಿತ್ರನಿರುವುದನ್ನು ಅನಾಯಾಸವಾಗಿ ಗುರುತಿಸಬಹುದು. ಅಲ್ಲಿನ ವಕೀಲರಾದ ಇಮಿ¤ಯಾಜ್‌ ರಶೀದ್‌ ಕುರೇಶಿ ಅವರೀಗ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಗೆ 1931ರಲ್ಲಿ ವಿಧಿಸಲಾಗಿದ್ದ ಮರಣದಂಡನೆಯ ಆದೇಶವನ್ನು ಅನೂರ್ಜಿತ ಗೊಳಿಸುವಂತೆ ಕೋರಿ ಲಾಹೋರ್‌ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಗತ್‌ಸಿಂಗ್‌ ಸ್ಮಾರಕ ಪ್ರತಿಷ್ಠಾನದ ಮುಖ್ಯಸ್ಥರಾಗಿರುವ ಕುರೇಶಿ, ಭಗತ್‌ಸಿಂಗ್‌ ಅವರನ್ನು ಅವಿಭಜಿತ ಭಾರತದ ಮುಕ್ತಿಗಾಗಿ ಆಂದೋಲನ ನಡೆಸಿದ ಸ್ವಾತಂತ್ರ್ಯ ಹೋರಾಟಗಾರನೆಂದು ಲಾಹೋರ್‌ ಹೈಕೋರ್ಟ್‌ ಘೋಷಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಲಯವು ಈ ಪ್ರಕರಣವನ್ನು ಪುನರ್‌ಪರಿಶೀಲನೆ ನಿಯಮದಡಿಯಲ್ಲಿ ಮರು ಸಮೀಕ್ಷಿಸಿ ಭಗತ್‌ಸಿಂಗ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುವಂತೆ ಪಾಕಿಸ್ಥಾನದ ಸರಕಾರಕ್ಕೆ ಸೂಚಿಸಬೇಕೆಂದು ಕುರೇಶಿ ವಿನಂತಿಸಿದ್ದಾರೆ. 1928ರ ಲಾಹೋರ್‌ ಸಂಚು ಪ್ರಕರಣದ ಆರೋಪಿಗಳಾಗಿದ್ದ ಭಗತ್‌ಸಿಂಗ್‌, ಸುಖದೇವ್‌ ಹಾಗೂ ಶಿವರಾಂ ರಾಜಗುರು ಇವರುಗಳ ಥಾಪರ್‌ ಕಡತವನ್ನು ಇನ್ನೂ ಸುರಕ್ಷಿತವಾಗಿ ಇರಿಸಿಕೊಂಡಿರುವುದಕ್ಕಾಗಿ ಲಾಹೋರ್‌ನ ಅನಾರ್ಕಲಿ ಬಜಾರ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ವರ್ಗಕ್ಕೆ ನಾವು ಅಭಿನಂದನೆ ಸಲ್ಲಿಸ ಬೇಕಾಗಿದೆ. ಅನಾರ್ಕಲಿ ಬಜಾರ್‌ನಲ್ಲಿ ಮೊಘಲ್‌ ಸಾಮ್ರಾಜಿn ನೂರ್‌ಜಹಾನಳ ಸ್ಮಾರಕ (ಗೋರಿ) ಕೂಡ ಇದೆ. ಭಗತ್‌ರೊಂದಿಗೆ ನೇಣುಗಂಬವೇರಿದ ರಾಜಗುರು, ಮಹಾರಾಷ್ಟ್ರ ಮೂಲದ ಕನ್ನಡಿಗ ಎಂಬುದು ಕರ್ನಾಟಕದವರಾದ ನಮಗೆ ಗೊತ್ತಿಲ್ಲ. ರಾಜಗುರುವಿಗೆ ಗಲ್ಲುಶಿಕ್ಷೆಯಾದಾಗ ಆತ ಇನ್ನೂ 22ರ ಯುವಕ ಎಂಬುದನ್ನು ಮರೆಯದಿರೋಣ.

Advertisement

Udayavani is now on Telegram. Click here to join our channel and stay updated with the latest news.

Next