ಮಾಸ್ತಿ: ಸರ್ಕಾರಿ ಕಾರು, ಗುರುತಿನ ಚೀಟಿ, ಸರ್ಕಾರದ ಆದೇಶ ಪ್ರತಿ ಜೊತೆಗೆ ಶೂಟು ಬೂಟು ಹಾಕಿಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಹಾರ ಮತ್ತು ಆರೋಗ್ಯ ಸಂಶೋ ಧನಾ ಅಧಿಕಾರಿ(ಎ ಡಬ್ಲ್ಯು ಎಫ್ ಸಿ ಐ) ಎಂದು ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಅಧಿಕಾರಿಯೊಬ್ಬನನ್ನು ಹೋಬಳಿಯ ನಟುವರಹಳ್ಳಿ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ನಕಲಿ ಆದೇಶ, ಐಡಿ ಕಾರ್ಡ್ ಇಟ್ಟುಕೊಂಡು ಬಾಡಿಗೆ ಕಾರಿಗೆ ಸರ್ಕಾರಿ ಸ್ಟಿಕ್ಕರ್ ಅಂಟಿಸಿಕೊಂಡು ಸರ್ಕಾರಿ ವಾಹನ ಎಂದು ಮಾರ್ಪಡಿಸಿ ಅಂಗನವಾಡಿ ಕೇಂದ್ರ, ನಮ್ಮ ಇಲಾಖೆಯಿಂದ ವಸತಿ ಅಭಿವೃದ್ಧಿಗೆ ಎರಡೂವರೆ ಲಕ್ಷ ರೂ. ಕೊಡಿಸುವುದಾಗಿ ನಂಬಿಸಿ ಆಧಾರ್, ರೇಷನ್ ಕಾರ್ಡ್ ಜೆರಾಕ್ಸ್‌ನೊಂದಿಗೆ 2 ರಿಂದ 3 ಸಾವಿರ ರೂ. ವಸೂಲಿ ಮಾಡುತ್ತಿದ್ದ ನಕಲಿ ಅಧಿಕಾರಿಯನ್ನು ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಬೊಮ್ಮಗಾನಹಳ್ಳಿ ವಿ.ವೇಣುಗೋಪಾಲಗೌಡ ಎಂದು ಗುರುತಿಸಲಾಗಿದೆ.
ಭೇಟಿ ಪುಸ್ತಕದಲ್ಲಿ ಸಹಿ ಹಾಕಿ ಮೊಹರು: ಇಲಾಖೆಯಿಂದ ನೀಡಿದ್ದಾರೆ ಎನ್ನಲಾದ ನಕಲಿ ಆದೇಶ ಪತ್ರ ಇಟ್ಟುಕೊಂಡು ನಾನು ಫುಡ್ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಎಂದು ಮಾಲೂರು ತಾಲೂಕಿನ ವೆಂಕಟರಾಜನಹಳ್ಳಿ, ತಿಮ್ಮನಾಯಕನಹಳ್ಳಿ, ಜಿನಗತಿಮ್ಮ ನಹಳ್ಳಿ, ನಾಗದೇನಹಳ್ಳಿ ಸೇರಿ ಟೇಕಲ್, ಕಸಬಾ, ಲಕ್ಕೂರು, ಮಾಸ್ತಿ ಹೋಬಳಿಯ ಕೆಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೂ ಅಲ್ಲದೆ, ತಾನು ಭೇಟಿ ನೀಡಿದ ಪ್ರತಿ ಕಡೆಯೂ ಸರ್ಕಾರಿ ದಾಖಲೆಯ ಭೇಟಿ ಪುಸ್ತಕದಲ್ಲಿ ತಾನು ಬಂದು ಪರಿಶೀಲಿಸಿದ ಬಗ್ಗೆ ಬರೆದು ಸಹಿ ಹಾಕಿ, ನಕಲಿ ಮೊಹರನ್ನೂ ಹಾಕಿದ್ದಾನೆ ಈ ಭೂಪ.
ತದನಂತರ ಭೇಟಿ ಕೊಟ್ಟಿರುವ ಬಗ್ಗೆ ಮಾಹಿತಿ ಪತ್ರ ಕೂಡ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು, ಶಾಲೆ ಮುಖ್ಯೋಪಧ್ಯಾಯರಿಂದ ಪಡೆದಿದ್ದಾನೆ.
ಇದನ್ನೂ ಓದಿ:- ಸಿದ್ಧರಾಮಯ್ಯರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿ: ಶ್ರೀನಿವಾಸ್ ಪ್ರಸಾದ್
3 ಸಾವಿರ ರೂ. ವಸೂಲಿ: ಅಲ್ಲದೆ, ಹೋದ ಕಡೆ ನಮ್ಮ ಇಲಾಖೆಯಿಂದ ವಸತಿ ಅಭಿವೃದ್ಧಿಗೆ ಎರಡೂವರೆ ಲಕ್ಷ ರೂ. ಕೊಡಿಸುವುದಾಗಿ ನಂಬಿಸಿ ಆಧಾರ್, ರೇಷನ್ ಕಾರ್ಡ್ ಜೆರಾಕ್ಸ್‌ನೊಂದಿಗೆ 2 ರಿಂದ 3 ಸಾವಿರ ರೂ. ಹಣ ವರೆಗೂ ವಸೂಲಿ ಮಾಡಿ ವಂಚಿಸಿರುವ ಬಗ್ಗೆಯೂ ತಿಳಿದು ಬಂದಿದೆ.
ವಾರದಿಂದ ಈ ನಕಲಿ ಅಧಿಕಾರಿ ಬಂಗಾರಪೇಟೆ, ಮಾಲೂರು ತಾಲೂಕಾದ್ಯಂತ ಓಡಾಡುತ್ತಿದ್ದು, ತಾಲೂಕು ಆಡಳಿತ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯನ ಕೈಗೆ ಸಿಕ್ಕಿಬಿದ್ದ ಚೋರ ಮಾಸ್ತಿ ಹೋಬಳಿಯ ಹಸಾಂಡಹಳ್ಳಿ ಗ್ರಾಪಂ ವ್ಯಾಪ್ತಿಯ ನಟುವರಹಳ್ಳಿಗೆ ಗುರುವಾರ ನಕಲಿ ಅಧಿಕಾರಿ ವೇಣುಗೋಪಾಲಗೌಡ ಬಂದಾಗ ಅಲ್ಲಿನ ಗ್ರಾಪಂ ಸದಸ್ಯರೊಬ್ಬರಿಗೆ ಅನುಮಾನ ಬಂದು ತಕ್ಷಣವೇ ತಾಲೂಕು ಸಿಡಿಪಿಒಗೆ ಫೋನಾಯಿಸಿ ವಿಚಾರಿಸಿದಾಗ ಅವರು ಇಂತಹ ಅಧಿಕಾರಿ ನಮ್ಮ ಇಲಾಖೆಯಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ತಕ್ಷಣವೇ ಗ್ರಾಮಸ್ಥರು ಆತನನ್ನು ಹಿಡಿದು ಮಾಸ್ತಿ ಪೊಲೀಸರ ವಶಕ್ಕೆ ಒಪ್ಪಿಸಿ ನಕಲಿ ಅಧಿಕಾರಿಯ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮಾಸ್ತಿ ಪೊಲೀಸರು ಆರೋಪಿ ವೇಣುಗೋಪಾಲಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಶುಕ್ರವಾರ ಕೇಸು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.