Advertisement

ನಗುವಿನ ಧಾಟಿ, ವ್ಯಂಗ್ಯದ ಛಾಟಿ

03:33 PM Jan 28, 2017 | |

ನಾಟಕ ಬರೆಯಲು ವಸ್ತುಗಳಿಗಾಗಿ ಅಲ್ಲಿ ಇಲ್ಲಿ ತಡಕಾಡಬೇಕಿಲ್ಲ. ನಮ್ಮ ಸುತ್ತಮುತ್ತ ನಡೆಯುವ ಸಂಗತಿ-ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಬರಹಕ್ಕೆ ವಿಪುಲ ಸಾಮಗ್ರಿಗಳು ದೊರೆಯುತ್ತವೆ. ಅದನ್ನು ವಿಮರ್ಶಕ ಕಣ್ಣುಗಳಿಂದ ಸೂಕ್ಷ್ಮವಾಗಿ ಗ್ರಹಿಸುತ್ತ ಹೋಗುವ ಸೃಜನಾತ್ಮಕ ದೃಷ್ಟಿ ಬೇಕಷ್ಟೇ. ಅಂಥ ವಸ್ತುಗಳು ಪ್ರಸ್ತುತವೂ ಆಗುತ್ತವೆ.

Advertisement

ಹೀಗೆ ಆಸಕ್ತಿ ಕೆರಳಿಸಿದ ನಾಟಕ  ಎಚ್‌. ಡುಂಡಿರಾಜ್‌ ಅವರ “ಪುಕ್ಕಟೆ ಸಲಹೆ’. ಇತ್ತೀಚೆಗೆ ಕೆ.ಇ.ಎ. ಪ್ರಭಾತ್‌ ರಂಗಮಂದಿರದಲ್ಲಿ ಪ್ರದರ್ಶನ ಕಂಡಿತು. ಯುವ ರಂಗಪ್ರತಿಭೆ ಬಿ.ಅಶೋಕ… ಸಮಾನಮನಸ್ಕ ಗೆಳೆಯರೊಡನೆ ಹುಟ್ಟು ಹಾಕಿದ “ವಿಶ್ವಪಥ ಕಲಾಸಂಸ್ಥೆ’ ಈ ನಾಟಕ ಪ್ರಯೋಗ, ರಂಗಪ್ರೇಮಿಗಳನ್ನು ನಗುವಿನ ಮಹಾಪೂರದಲ್ಲಿ ತೇಲಿಸಿತು.

ಚುಟುಕು ಕವಿಯಾಗಿ ಹೆಸರು ಮಾಡಿರುವ ಪ್ರಸಿದ್ಧ ಲೇಖಕ ಡುಂಡಿರಾಜರ ಹಾಸ್ಯಪ್ರಜ್ಞೆಯ ಎರಕದಲ್ಲಿ ನಾಟಕ ಪ್ರತಿ ದೃಶ್ಯದಲ್ಲೂ ಆಸಕ್ತಿ ಕೆರಳಿಸುತ್ತ ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಯಿತು. ದಿನಂಪ್ರತಿ ಎಲ್ಲ ಟಿವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನುನೈಜ ರೀತಿಯಲ್ಲಿ ಬಿಚ್ಚಿಟ್ಟಿರುವ ನಾಟಕ, ಮೇಲ್ನೋಟಕ್ಕೆ ನಗು ತರಿಸಿದರೂ, ಉದರನಿಮಿತ್ತ ತೊಡುವ ಬಹುಕೃತ ವೇಷಗಳ ಕಟು ವಾಸ್ತವದ ಚಿತ್ರಣ. ಬದುಕಿನ ಹಲವು ವಿಪರ್ಯಾಸದ ಸಂಗತಿಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿತು. ಪ್ರತಿದಿನ ಬೆಳಗ್ಗೆ ಟಿವಿಯ ಈ ಕಾರ್ಯಕ್ರಮ ವೀಕ್ಷಣೆಯನ್ನೇ ವ್ಯಸನ ಮಾಡಿಕೊಂಡ ನೋಡುಗರ ಕಣ್ತೆರೆಸುವುದು ನಾಟಕದ ಸದಾಶಯ.

ನಾಟಕದ ಮೊದಲ ದೃಶ್ಯವೇ ಆಸಕ್ತಿ ಕೆರಳಿಸಿತು. ಸರ್ವಾಲಂಕಾರ ಭೂಷಿತನಾದ ಜ್ಯೋತಿಷಿ, ಸುಂದರ ಯುವ ನಿರೂಪಕಿಯೊಂದಿಗೆ, ಸಿಂಹಾಸನದ ಮೇಲೆ ಠೀಕಾಗಿ ಆಲಂಕರಿಸಿರುತ್ತಾನೆ. ಅವನ ಗಮನವೆಲ್ಲ ತನ್ನ ಬಾಹ್ಯಾಲಂಕಾರದ ಕಡೆಗೇ. ಮೇಕಪ್ಪಿನ ಕಡೆಯ ಟಚಪ್ಪಿನೊಂದಿಗೆ ತೃಪ್ತನಾಗಿ ಸಿದ್ಧನಾಗುತ್ತ, ಪ್ರೇಕ್ಷಕರ ಪ್ರಶ್ನೆಗಳಿಗೆ ಪರಿಹಾರ ಸೂಚಿಸಲು ತೊಡಗುವ ನಾಟಕೀಯ ರಂಗತಂತ್ರ ಆಕರ್ಷಕವಾಗಿದೆ.

ರಂಗದ ಮಧ್ಯದಲ್ಲಿ ಜ್ಯೋತಿಷಿಯ ಪೀಠ. ಅವನ ಎರಡೂ ಪಕ್ಕಗಳಲ್ಲಿ ಪ್ರಶ್ನಾರ್ಥಿಗಳ ದಂಡು. ಸಮಸ್ಯೆಗಳ ತಳಮಳದಲ್ಲಿರುವ ಜನಸಾಮಾನ್ಯರ ಸಂಕಟ-ಗೊಂದಲಗಳ ವಿವಿಧ ಹಾವಭಾವಗಳು,ಪಾತ್ರಗಳ ಕಾತುರ, ಉತ್ಸುಕತೆಗಳು ಗಮನ ಸೆಳೆಯುವಂತಿದ್ದವು. ಅವರು ಕೇಳುವ ವೈವಿಧ್ಯಮಯ ಸಮಸ್ಯೆ-ಪ್ರಶ್ನೆಗಳಿಗೆಲ್ಲ ಜ್ಯೋತಿಷಿ ಉತ್ತರಿಸುತ್ತ  ಹೋಗುವ ಶೈಲಿ ಹಾಸ್ಯಕ್ಕೆಡೆ ಮಾಡಿಕೊಟ್ಟಿತು. ದೈನಂದಿನ ಜೀವನದಲ್ಲಿ ಜನರನ್ನು ಕಾಡುವ ಅನೇಕ ಪ್ರಶ್ನೆ-ಗೊಂದಲಗಳ ಬಗೆ ಅಚ್ಚರಿ ತರಿಸಿದರೆ, ಅವರ ಅತೀವ ಆತಂಕ ಕೆಲವೊಮ್ಮೆ ನಗು ತರಿಸಿದರೂ, ಸುತ್ತಲ ವಾಸ್ತವ ಬದುಕನ್ನು ಕಟ್ಟಿಕೊಡುವ ಬಗೆ ಸಹಜವಾಗಿತ್ತು.

Advertisement

ಜ್ಯೋತಿಷಿಯ ಪ್ರಶ್ನೋತ್ತರದ ನಡುವೇ ಬ್ರೇಕ್‌ಗಳು ಇರುತ್ತಿದ್ದವು. ವಿರಾಮದ ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಾಣಿಜ್ಯ ಜಾಹೀರಾತಿನ ತುಣುಕುಗಳು ಪುಟ್ಟ ಪುಟ್ಟ ಸನ್ನಿವೇಶಗಳನ್ನು ನಿರ್ಮಾಣ ಮಾಡಿ ಹಾಸ್ಯ ರಸಾಯನ ಉಣಬಡಿಸುತ್ತಿದ್ದವು. ಹಾಗೆಯೇ ಜಾಹಿರಾತಿನ ಪರಿ ಕೂಡ ವಿಡಂಬನೆಯಿಂದ ಕೂಡಿದ್ದವು. “ಪುಕ್ಕಟೆ ಸಲಹೆಗಳ ವಾಹಿನಿಯಲ್ಲಿ ಒಂದೂವರೆ ಗಂಟೆಗಳ ಕಾಲ ಸತತ ನಗುವಿನ ಧಾರೆ.

ನಟರೆಲ್ಲರೂ ಸಮಯಸ್ಫೂರ್ತಿಯಿಂದ ಸಹಜವಾಗಿ ನಟಿಸಿದರು. ದುಂಡಿರಾಜ… ಅವರು ರಚಿಸಿದ ಮೂಲ ನಾಟಕಾವಧಿ ಸುಮಾರು ಮುಕ್ಕಾಲು ಗಂಟೆ. ಅದನ್ನು ಅಭಿನಯಿಸಿದ ಕಲಾವಿದರು ಹಿಗ್ಗಿಸಿದ್ದು ಅರ್ಥಪೂರ್ಣವಾಗಿತ್ತು. ಶಾಸಿŒಯಾಗಿ ಉತ್ತಮವಾಗಿ ನಟಿಸಿದ ಬಿ. ಅಶೋಕ್‌, ನಾಟಕದ ನಿರ್ದೇಶಕರೂ ಕೂಡ. ಪಾತ್ರಗಳ ವಿವಿಧ ಬಗೆಯ ಪ್ರಾದೇಶಿಕ ಕನ್ನಡ ಭಾಷೆಯ ಬಳಕೆ ಚೆನ್ನಾಗಿತ್ತು. ಫ‌ಲ್ಗುಣಿ ದಾಸ್‌, ಅರ್ಪಿತಾ, ಮಂಜುಕೃಷ್ಣ , ಅಕ್ಷತಾ, ವಿನೋದ್‌ ಪಟ್ಟಣಶೆಟ್ಟಿ ಗಮನ ಸೆಳೆದರು. ಮುರಳಿಧರ್‌ ಚಿಮ್ಮಲಗಿ, ಕುಮಾರಸ್ವಾಮಿ, ಸುಜಿತ್‌, ವೆಂಕಟೇಶ್‌, ರಿತು, ಮಂಜು ಕಡೂರು, ವರದರಾಜ… ಮತ್ತು ಜೈರಾಮ… ಹದವಾಗಿ ನಟಿಸಿದರು.

-ಎಸ್‌.ವಿ. ಕೃಷ್ಣ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next