Advertisement
ಕ್ರೀಡಾಕೂಟಗಳು ಸಹಿತ ಉತ್ಸವ ಸಮಾರಂಭ ಗಳಿಗೆ ವಿನಿಯೋಗವಾಗಬೇಕಾಗಿದ್ದ ಮಂಗಳೂರಿನ ಲಾಲ್‌ಬಾಗ್ ಬಳಿ ಇರುವ ಕರಾವಳಿ ಉತ್ಸವ ಮೈದಾನ ಇದೀಗ ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ. ಕೆಲವು ಸಮಯಗಳ ಹಿಂದೆ ಕರಾವಳಿ ಉತ್ಸವ ಮೈದಾನವನ್ನು ಎರಡು ಭಾಗವಾಗಿ ವಿಂಗಡಿಸಿ ಅದಕ್ಕೆ ತಂತಿ ಬೇಲಿ ಅಳವಡಿಸಲಾಗಿತ್ತು. ಇದರ ಒಂದು ಭಾಗವನ್ನು ಸದ್ಯ ಸಾರ್ವಜನಿಕರು ಆಟವಾಡಲು ಉಪಯೋಗಿಸುತ್ತಿದ್ದಾರೆ. ಮತ್ತೂಂದು ಭಾಗದಲ್ಲಿ ಮಣ್ಣು, ಡಾಮರು ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ.
Related Articles
Advertisement
ಕರಾವಳಿ ಉತ್ಸವ ಮೈದಾನದಲ್ಲಿ ಸದ್ಯ ಯಾವುದೇ ರೀತಿಯ ನೈರ್ಮಲ್ಯ ಪಾಲನೆ ಮಾಡಲಾಗುತ್ತಿಲ್ಲ. ಕಟ್ಟಡ ತ್ಯಾಜ್ಯ, ಡಾಮರು, ಕಾಂಕ್ರೀಟ್ ಸಹಿತ ಮಣ್ಣು ರಾಶಿ ಹಾಕಲಾಗಿದೆ. ಇದೇ ಮೈದಾನಲ್ಲಿ ಸ್ವತ್ಛ ಮಂಗಳೂರು ಕಸದ ವಾಹನಗಳು ಕೂಡ ನಿಲ್ಲುತ್ತಿದೆ. ಟಯರ್‌ಗಳು ಮೈದಾನದಲ್ಲಿ ಹೂತ ಕಾರಣ ಯಾವುದೇ ಸಮಾರಂಭ ನಡೆಯುವುದಾದರೆ ಮೈದಾನ ಹದಗೊಳಿಸಲು ಕೆಲವು ದಿನಗಳ ಸಮಯಬೇಕು. ಇನ್ನು ಮೈದಾನದಲ್ಲಿ ಹುಲ್ಲು ಬೆಳೆದುಕೊಂಡಿದ್ದು, ಕಟಾವು ಮಾಡಲಾಗಿಲ್ಲ. ತಂತಿ ಬೇಲಿಗೆ ತ್ಯಾಜ್ಯಗಳನ್ನು ಹಾಕಲಾಗಿದ್ದು, ಪ್ಲಾಸ್ಟಿಕ್, ಚಾಕೋಲೆಟ್ ರ್ಯಾಪರ್, ಹಾಸಿಗೆ, ಬಾಟಲಿಗಳು, ಬಳಕೆಯಾಗದ ಚಪ್ಪಲಿಗಳೆಲ್ಲ ಮೈದಾನದಲ್ಲೇ ಬಿದ್ದುಕೊಂಡಿವೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ಮಂಗಳಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಅಗೆಯಲಾಗುತ್ತಿದೆ. ಅಲ್ಲಿನ ಕೆಂಪು ಮಣ್ಣನ್ನು ಸದ್ಯ ಕರಾವಳಿ ಉತ್ಸವ ಮೈದಾನದಲ್ಲಿ ರಾಶಿ ಹಾಕಲಾಗಿದೆ. ಸದ್ಯ ಯಾವುದೇ ಕಾರ್ಯಕ್ರಮ ಇಲ್ಲದ ಕಾರಣ ತೊಂದರೆ ಇಲ್ಲ. ಇದೇ ಮೈದಾನದಲ್ಲಿ ರಾಶಿ ಹಾಕಲಾದ ಬೇರೆಡೆಯ ಮಣ್ಣನ್ನು ಸ್ಥಳಾಂತರಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸದ್ಯದಲ್ಲೇ ಮಣ್ಣನ್ನು ವಿಲೇವಾರಿ ಮಾಡಲಾಗುತ್ತದೆ. –ಪ್ರದೀಪ್ ಡಿ’ಸೋಜಾ, ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ