ಕೋಲ್ಕತ : ಕೋಲ್ಕತ ಮಹಾ ನಗರದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ, ತ್ಯಾಜ್ಯ ರಾಶಿ ಹಾಕುವವರಿಗೆ ಇನ್ನು ಮುಂದೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಪಶ್ಚಿಮ ಬಂಗಾಲ ವಿಧಾನಸಭೆ ಈ ಸಂಬಂಧ ಮಸೂದೆಯೊಂದನ್ನು ಪಾಸು ಮಾಡಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ, ತ್ಯಾಜ್ಯ ಇತ್ಯಾದಿಗಳನ್ನು ಹಾಕುವ ಅಪರಾಧಕ್ಕೆ1 ಲಕ್ಷ ರೂ. ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸಿದೆ.
ಕೋಲ್ಕತ ಮುನಿಸಿಪಲ್ ಕಾರ್ಪೊರೇಶನ್ (ಎರಡನೇ ತಿದ್ದುಪಡಿ) ಕಾಯಿದೆಯ ಸೆ.338ಕ್ಕೆ ಪಶ್ಚಿಮ ಬಂಗಾಲ ಸರಕಾರ ತಿದ್ದುಪಡಿ ತಂದಿದ್ದು ಇದನ್ನು ನಿನ್ನೆ ಗುರುವಾರ ವಿಧಾನ ಸಭೆಯಲ್ಲಿ ಅನುಮೋದಿಸಲಾಯಿತು.
ಹೊಸದಾಗಿ ನಿರ್ಮಾಣಗೊಂಡು ಉದ್ಘಾಟನೆಗೊಂಡ ದಕ್ಷಿಣೇಶ್ವರ ಸ್ಕೈವಾಕ್ ನಲ್ಲಿ ರಾಶಿ ರಾಶಿ ಕಸ, ತ್ಯಾಜ್ಯ, ವೀಳ್ಯದೆಲೆ ತಿಂದು ಉಗಿಯಲ್ಪಟ್ಟ ಎಂಜಲು ಮುಂತಾದ ಅಸಹ್ಯ ಗಲೀಜು, ರಾಶಿ ಬಿದ್ದಿರುವುದನ್ನು ಗಮನಿಸಿ ತೀವ್ರವಾಗಿ ಕೋಪಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯ ಹಾಕಿ ಮಲಿನ ಮಾಡುವವರನ್ನು ಪ್ರಬಲವಾಗಿ ದಂಡಿಸುವ ಸಂಕಲ್ಪ ತಳೆದರು. ಅದರ ಫಲವಾಗಿ 1 ಲಕ್ಷ ರೂ. ದಂಡ ಹೇರುವ ಕಾನೂನನ್ನು ಜಾರಿಗೆ ತಂದರು ಎಂದು ವರದಿಗಳು ತಿಳಿಸಿವೆ.
ಪಾಸಾಗಿರುವ ಮಸೂದೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ ತ್ಯಾಜ್ಯ ಹಾಕುವವರಿಗೆ ಕನಿಷ್ಠ 5,000 ರೂ.ಗಳಿಂದ ಗರಿಷ್ಠ 1 ಲಕ್ಷ ರೂ. ವರೆಗೆ ದಂಡ ಹೇರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನ ಕಾನೂನಿನ ಪ್ರಕಾರ ಕನಿಷ್ಠ 50 ರೂ. ಮತ್ತು ಗರಿಷ್ಠ 5,000 ರೂ. ದಂಡ ಹೇರುವುದಕ್ಕೆ ಅವಕಾಶವಿತ್ತು.