ತುಮಕೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆದಿದ್ದ ರಾಜ್ಯ ಬಂದ್ ಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳು ಸಾಮಾನ್ಯವಾಗಿ ತೆರೆದಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ.
ಶನಿವಾರ ಬೆಳಿಗ್ಗೆಯೇ ರಸ್ತೆಗಿಳಿದ ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆಟೋ, ಟ್ಯಾಕ್ಸಿ, ಅಂಗಡಿ ಮುಂಗಟ್ಟು ಬಂದ್ ಮಾಡಿಸುವ ಕನ್ನಡ ಪರ ಸಂಘನೆಗಳ ಪ್ರಯತ್ನ ವಿಫಲವಾಗಿದೆ.
ನಗರದ ಎಂ.ಜಿ.ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಎಸ್.ಎಸ್.ಪುರಂ, ಬಟವಾಡಿ, ಕುಣಿಗಲ್ ರಸ್ತೆ, ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟ ಎಂದಿನಂತೆ ಇತ್ತು.
ಇದನ್ನೂ ಓದಿ:ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಬಸ್, ಆಟೋ ಸಂಚರಿಸುತ್ತಿದ್ದವು. ಬೆಳಿಗ್ಗೆ ಕೆಲವು ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಮುಚ್ಚಿ ಆನಂತರ ಬಂದ್ ಬಿಸಿ ಇಲ್ಲದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳ ವ್ಯಾಪಾರದಲ್ಲಿ ತೊಡಗಿದ್ದಾರೆ.
ಎಂದಿನಂತೆ ಕೆಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ ಗಳು ಸಂಚರಿಸುತ್ತಿದ್ದು ಪ್ರಯಾಣಿಕರ ಸಂಖ್ಯೆಯೂ ಮಾಮೂಲಿನಂತಿದೆ. ಜಿಲ್ಲೆಯಲ್ಲಿಯೂ ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಎಲ್ಲಾ ಕಡೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು