ಬೆಂಗಳೂರು: ಸಾಯಿ ಕಿಶೋರ್ ಮತ್ತು ವಾಸುಕಿ ಕೌಶಿಕ್ ಅದ್ಭುತ ಬೌಲಿಂಗ್ ಸಹಾಯದಿಂದ ದಕ್ಷಿಣ ವಲಯ ತಂಡವು ದುಲೀಪ್ ಟ್ರೋಫಿ ಗೆದ್ದು ಬೀಗಿದೆ. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯವನ್ನು 75 ರನ್ ಅಂತರದಿಂದ ಸೋಲಿಸಿ ಕಪ್ ಗೆದ್ದಿದೆ.
ಗೆಲುವಿಗೆ 298 ರನ್ ಗುರಿ ಪಡೆದ ಪಶ್ವಿಮ ವಲಯ ತಂಡವು 222 ರನ್ ಗಳಿಗೆ ಆಲೌಟಾಯಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಐದನೇ 182 ರನ್ ಗಳಿಸಿದ್ದ ಪಶ್ಚಿಮ ವಲಯವು ಐದನೇ ದಿನದಾಟದ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡಿತು.
92 ರನ್ ಗಳಿಸಿ ಹೋರಾಟ ಜಾರಿಯಲ್ಲಿರಿಸಿದ್ದ ನಾಯಕ ಪ್ರಿಯಾಂಕ್ ಪಾಂಚಾಲ್ ಇಂದು 95 ರನ್ ಗೆ ವಿಕೆಟ್ ಒಪ್ಪಿಸಿದರು. ಅವರನ್ನು ವಿದ್ವತ್ ಕಾವೇರಪ್ಪ ಪಾಂಚಾಲ್ ವಿಕೆಟ್ ಪಡೆದರು. ದಕ್ಷಿಣ ವಲಯದ ಪರವಾಗಿ ವಾಸುಕಿ ಕೌಶಿಕ್ ಮತ್ತು ಸಾಯಿ ಕಿಶೋರ್ ತಲಾ ನಾಲ್ಕು ವಿಕೆಟ್ ಪಡೆದರು.
ಇದನ್ನೂ ಓದಿ:ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ; ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ!
ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ ನಲ್ಲಿ 213 ರನ್ ಗಳಿಸಿದ್ದರೆ ಪಶ್ಚಿಮ ವಲಯವು 146 ರನ್ ಮಾತ್ರ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ವಲಯ 230 ರನ್ ಮಾಡಿದರೆ ಪಶ್ಚಿಮ ವಲಯ ತಂಡವು 222 ರನ್ ಗಳಿಸಿತು.
ಮೊದಲ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ಪಡೆದ ವಿದ್ವತ್ ಕಾವೇರಪ್ಪ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.