ಬೆಂಗಳೂರು: ಬುಧವಾರ ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ್ಗೊಂಡ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಪಶ್ಚಿಮ ವಲಯ ವಿರುದ್ಧ ದಕ್ಷಿಣ ವಲಯ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದೆ. 7 ವಿಕೆಟಿಗೆ 182 ರನ್ ಗಳಿಸಿ ಮೊದಲ ದಿನದಾಟ ಮುಗಿಸಿದೆ.
ಮಳೆ ಹಾಗೂ ಮಂದಬೆಳಕಿನಿಂದಾಗಿ ದಿದನಾಟ 65 ಓವರ್‌ಗಳಿಗೆ ಸೀಮಿತಗೊಂಡಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಶ್ಚಿಮ ವಲಯ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತಾದರೂ ಇದು ನಿಧಾನ ಗತಿಯ ಟ್ರ್ಯಾಕ್ ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಬ್ಯಾಟಿಂಗ್ ಸುಲಭವಲ್ಲ ಎಂಬುದು ಮೊದಲ ದಿನವೇ ಸಾಬೀತಾಗಿದೆ.
ನಾಯಕ ಹನುಮ ವಿಹಾರಿ, ಸ್ಥಳೀಯ ಬ್ಯಾಟಿಂಗ್ ಹೀರೋ ಮಾಯಾಂಕ್ ಅಗರ್ವಾಲ್ ಮತ್ತು ತಿಲಕ್ ವರ್ಮ ಮಾತ್ರ ಬ್ಯಾಟಿಂಗ್‌ನಲ್ಲಿ ಯಶಸ್ಸು ಕಂಡರು. ಕರ್ನಾಟಕದವರೇ ಆದ ಓಪನರ್ ಆರ್. ಸಮರ್ಥ್ ಅವರ ವೈಫಲ್ಯ ಮತ್ತೆ ತಂಡವನ್ನು ಕಾಡಿತು. ಅವರು ಕೇವಲ 7 ರನ್ ಮಾಡಿ ನಿರ್ಗಮಿಸಿದರು. ಕೀಪರ್ ರಿಕ್ಕಿ ಭುಯಿ (9), ಕೇರಳದ ಸಚಿನ್ ಬೇಬಿ (7) ಕೂಡ ಯಶಸ್ಸು ಕಾಣಲಿಲ್ಲ.
ಸೆಮಿಫೈನಲ್‌ನಲ್ಲಿ ಮಿಂಚದ ಹನುಮ ವಿಹಾರಿ ಇಲ್ಲಿ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರಿಂದ ಇನ್ನಿಂಗ್ಸ್‌ನ ಏಕೈಕ ಅರ್ಧ ಶತಕ ದಾಖಲಾಯಿತು. 130 ಎಸೆತ ಎದುರಿಸಿ ನಿಂತ ವಿಹಾರಿ 9 ಬೌಂಡರಿ ನೆರವಿನಿಂದ 63 ರನ್ ಹೊಡೆದರು. ತಿಲಕ್ ವರ್ಮ ಅವರಿಂದ 40 ರನ್ ಸಂದಾಯವಾಯಿತು (87 ಎಸೆತ, 5 ಬೌಂಡರಿ, 1 ಸಿಕ್ಸರ್). ಮಾಯಾಂಕ್ ಅಗರ್ವಾಲ್ ಬಿರುಸಿನ ಆಟದ ಸೂಚನೆ ನೀಡಿದರೂ ಇನ್ನಿಂಗ್ಸ್ ವಿಸ್ತರಿಸಲು ವಿಫಲರಾದರು. ಅವರ ಗಳಿಕೆ 28 ರನ್ (47 ಎಸೆತ, 6 ಬೌಂಡರಿ). ವಾಷಿಂಗ್ಟನ್ ಸುಂದರ್ 9 ಮತ್ತು ವಿಜಯ್‌ಕುಮಾರ್ ವೈಶಾಖ್ 5 ರನ್ ಮಾಡಿ ಆಡುತ್ತಿದ್ದಾರೆ.
ಪಶ್ಚಿಮ ವಲಯದ ಬೌಲಿಂಗ್ ಸರದಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದವರೆಂದರೆ ಅರ್ಜಾನ್ ನರ್ಗಸ್ವಾಲಾ, ಚಿಂತನ್ ಗಜ ಮತ್ತು ಶಮ್ಸ್ ಮುಲಾನಿ. ಮೂವರೂ ತಲಾ 2 ವಿಕೆಟ್ ಕೆಡವಿದರು. ಒಂದು ವಿಕೆಟ್ ಅತೀತ್ ಸೇಠ್ ಪಾಲಾಯಿತು. 60 ಓವರ್‌ಗಳ ಆಟ ಮುಗಿದಾಗ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿತ್ತು. ಆಗ ದಕ್ಷಿಣ ವಲಯ 6 ವಿಕೆಟ್ ನಷ್ಟಕ್ಕೆ 170 ರನ್ ಮಾಡಿತ್ತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ ಪ್ರಥಮ ಇನ್ನಿಂಗ್ಸ್-7 ವಿಕೆಟಿಗೆ 182 (ವಿಹಾರಿ 63, ತಿಲಕ್ ವರ್ಮ 40, ಅಗರ್ವಾಲ್ 28, ಶಮ್ಸ್ ಮುಲಾನಿ 19ಕ್ಕೆ 2, ಚಿಂತನ್ ಗಜ 27ಕ್ಕೆ 2, ನರ್ಗಸ್ವಾಲಾ 45ಕ್ಕೆ 2).