Advertisement

Duleep Trophy Cricket: ಇಂದಿನಿಂದ ದ್ವಿತೀಯ ಸುತ್ತಿನ ಹಣಾಹಣಿ

11:08 PM Sep 11, 2024 | Team Udayavani |

ಅನಂತಪುರ: ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಸ್ಪರ್ಧೆಗಳು ಗುರುವಾರ ಅನಂತಪುರದ 2 ಕ್ರೀಡಾಂಗಣಗಳಲ್ಲಿ ಏಕಕಾಲಕ್ಕೆ ಆರಂಭವಾಗಲಿವೆ. ಒಂದರಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಡಿ, ಇನ್ನೊಂದರಲ್ಲಿ ಇಂಡಿಯಾ ಬಿ ಮತ್ತು ಇಂಡಿಯಾ ಸಿ ತಂಡಗಳು ಎದುರಾಗಲಿವೆ.

Advertisement

ಮೊದಲ ಸುತ್ತಿನಲ್ಲಿ ಇಂಡಿಯಾ ಬಿ ಮತ್ತು ಇಂಡಿಯಾ ಸಿ ತಂಡಗಳು ಜಯ ಸಾಧಿಸಿದ್ದವು. ಹೀಗಾಗಿ ಎ ಮತ್ತು ಡಿ ತಂಡಗಳ ಮೇಲೆ ಸಹಜವಾಗಿಯೇ ಒತ್ತಡವಿದೆ. ಈ ಬಾರಿ ಇಂಡಿಯಾ ಎ ತಂಡದ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದ್ದು, ಶುಭಮನ್‌ ಗಿಲ್‌ ಬದಲು ಮಾಯಾಂಕ್‌ ಅಗರ್ವಾಲ್‌ ಮುನ್ನಡೆಸಲಿದ್ದಾರೆ.

ಶುಭಮನ್‌ ಗಿಲ್‌ ಸೇರಿದಂತೆ, ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗಾಗಿ ಆಯ್ಕೆಯಾದ ಹೆಚ್ಚಿನೆಲ್ಲ ಆಟಗಾರರನ್ನು ದುಲೀಪ್‌ ಟ್ರೋಫಿಯಿಂದ ಹೊರಗುಳಿಸಲಾಗಿದೆ. ಟೀಮ್‌ ಇಂಡಿಯಾದ ಏಕೈಕ ಸದಸ್ಯನೆಂದರೆ ಸಫ‌ìರಾಜ್‌ ಖಾನ್‌. ಇವರ ಸಹೋದರ ಮುಶೀರ್‌ ಖಾನ್‌ ಮೊದಲ ಪಂದ್ಯದಲ್ಲಿ 181 ರನ್‌ ಬಾರಿಸುವ ಇಂಡಿಯಾ ಬಿ ತಂಡದ ಗೆಲುವಿನ ರೂವಾರಿಯಾಗಿದ್ದರು.

ರಿಂಕು, ಪ್ರಸಿದ್ಧ್ ಆಯ್ಕೆ
ಉಳಿದಂತೆ ಮೊದಲ ಸುತ್ತಿನ ವೇಳೆ ಆಯ್ಕೆಯಾಗದಿದ್ದ ಬಿಗ್‌ ಹಿಟ್ಟರ್‌ ರಿಂಕು ಸಿಂಗ್‌, ಪೇಸ್‌ ಬೌಲರ್‌ ಪ್ರಸಿದ್ಧ್ ಕೃಷ್ಣ ಈ ಬಾರಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಕ್ರಮವಾಗಿ ಬಿ ಮತ್ತು ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವರ್ಷಾಂತ್ಯ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳುವುದರಿಂದ ಪ್ರಸಿದ್ಧ್ ಕೃಷ್ಣ ಫಾರ್ಮ್ ಗಮನಿಸಲು ಇದೊಂದು ಉತ್ತಮ ಅವಕಾಶ.

ಇಂಡಿಯಾ ಬಿ ತಂಡದಲ್ಲಿ ವಾಷಿಂಗ್ಟನ್‌ ಸುಂದರ್‌, ಪೇಸರ್‌ ಮುಕೇಶ್‌ ಕುಮಾರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇಂಡಿಯಾ ಸಿ ತಂಡದ ಋತುರಾಜ್‌ ಗಾಯಕ್ವಾಡ್‌-ಸಾಯಿ ಸುದರ್ಶನ್‌ ಭಾರತದ ಮೀಸಲು ಆರಂಭಿಕರಾಗಿದ್ದು, ರನ್‌ ರಾಶಿ ಪೇರಿಸಬೇಕಿದೆ. ಎಡಗೈ ಸ್ಪಿನ್ನರ್‌ ಮಾನವ್‌ ಸುಥಾರ್‌ ಡಿ ತಂಡದ ವಿರುದ್ಧ ಮ್ಯಾಚ್‌ ವಿನ್ನಿಂಗ್‌ ಸಾಧನೆಗೈದಿದ್ದರು. ಇದನ್ನು ಪುನರಾವರ್ತಿಸಿದರೆ ಉಜ್ವಲ ಭವಿಷ್ಯವನ್ನು ನಿರೀಕ್ಷಿಸಲಡ್ಡಿಯಿಲ್ಲ.

Advertisement

ಡಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಪಾಲಿಗೆ ಇದೊಂದು ಬಲವಾದ ಅಗ್ನಿಪರೀಕ್ಷೆ. ತಂಡವನ್ನು ಗೆಲುವಿನ ಹಳಿಗೆ ತರಬೇಕಿರುವ ಅವರು, ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.