Advertisement

ಮಳೆಗಾಲ ಆರಂಭಕ್ಕೆ ದಿನಗಣನೆ : ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ

08:01 PM May 22, 2019 | Team Udayavani |

ಮಡಿಕೇರಿ: ಮಳೆಗಾಲ ಆರಂಭಕ್ಕೆ ಇನ್ನು ಒಂದು ವಾರ ಬಾಕಿ ಉಳಿದಿರುವಂತೆಯೇ ಕೊಡಗು ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

Advertisement

ಕಳೆದ ವರ್ಷದಂತೆ ಈ ಬಾರಿಯೂ ಪ್ರವಾಹ ಪರಿಸ್ಥಿತಿ ಎದುರಾದರೆ ಅದನ್ನು ಹೇಗೆ ನಿಭಾಯಿಸಬಹುದು ಎನ್ನುವ ಬಗ್ಗೆ ಹಲವು ವಿಧದಲ್ಲಿ ಚಿಂತನೆ ನಡೆಸಿರುವ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಈಗಾಗಲೇ ಕಾರ್ಯನಿರತರಾಗಿದ್ದಾರೆ. ಕಳೆದ ಸಾಲಿನ ಮುಂಗಾರಿನ ಆರಂಭಕ್ಕೂ ಮುನ್ನವೇ ಸುರಿದ ಭಾರೀ ಪ್ರಮಾಣದ ಅಕಾಲಿಕ ಮಳೆಯಿಂದ ದಕ್ಷಿಣ ಕೊಡಗಿನ ವೀರಾಜಪೇಟೆ ತಾಲ್ಲೂಕಿನ ಮಾಕುಟ್ಟ ವಿಭಾಗದಲ್ಲಿ ಕಂಡು ಕೇಳರಿಯದ ಅನಾಹುತಗಳು ನಡೆದಿತ್ತು. ಇದರಿಂದ ಹದಗೆಟ್ಟಿದ್ದ ರಸ್ತೆಗಳನ್ನು ಸಮರೋಪಾದಿಯ ಕಾರ್ಯಾಚರಣೆಗಳ ಮೂಲಕ ಸರಿಪಡಿಸಿ ಅಂತಾರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಬಾರಿಯೂ ಭಾರೀ ಪ್ರಮಾಣದ ಮಳೆಯಿಂದ ಮಾಕುಟ್ಟ-ಕಣ್ಣೂರು ರಸ್ತೆಯ ಇಕ್ಕೆಲಗಳಲ್ಲಿನ ಮರಗಳು ಮುರಿದು ಬೀಳುವುದು ಸೇರಿದಂತೆ ಇನ್ನಿತರ ಯಾವುದೇ ಅವಘಡಗಳಿಗೆ ಜನಸಾಮಾನ್ಯರು ಸಿಲುಕಿಕೊಳ್ಳದಂತೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಪ್ರಯಾಣಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಚನಾ ಫ‌ಲಕಗಳನ್ನು ಅಳವಡಿಸಲಾಗಿದೆ.

ಪ್ರಸ್ತುತ ಕಣ್ಣೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಅಲ್ಲಿಗೆ ಜಿಲ್ಲೆಯಿಂದ ತೆರಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ಸೂಚನಾ ಫ‌ಲಕಗಳು ಮಹತ್ವವನ್ನು ಪಡೆದುಕೊಳ್ಳುತ್ತದೆ. ಮದೆನಾಡು, ಜೋಡುಪಾಲ ವಿಭಾಗಗಳಲ್ಲಿ ಪ್ರವಾಹದಿಂದ ಕೊಚ್ಚಿಕೊಂಡು ಬಂದಿದ್ದ ಮರಗಳನ್ನು ತೆರವುಗೊಳಿಸಿ. ನೀರಿನ ಹರಿವನ್ನು ಸುಗಮ ಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ.

ವಿಕೋಪ ಎದುರಿಸಲು ತಯಾರಿ- ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಎದುರಾದಲ್ಲಿ ಸಮರ್ಪಕವಾಗಿ ಎದುರಿಸುವ ಸಲುವಾಗಿ ಮಡಿಕೇರಿಯಲ್ಲಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯದ ಪೂರ್ವ ತಯಾರಿಗಳು ನಡೆದಿದೆ.

Advertisement

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಎದುರಾದಲ್ಲಿ ಸಮರ್ಪಕವಾಗಿ ಎದುರಿಸಲು ಅಗತ್ಯ ರಕ್ಷಣಾ ಕವಾಯತ್ತು ಮಾಡುತ್ತಾ ರೋಪ್‌ ರೇಸ್ಕೂ ಡ್ರಿಲ್‌, ಲಾಡರ್‌ ಡ್ರಿಲ್‌, ಫೈಯರ್‌ ಮ್ಯಾನ್‌ ಲಿಫ್ಟ್, ಕ್ರಾಲಿಂಗ್‌ ಸರ್ಚ್‌, ರಾತ್ರಿ ಸಮಯದ ಕಾರ್ಯಾಚರಣೆಗೆ ತಯಾರಿ ಮುಂತಾದ ತಾಲೀಮು ನಡೆಸಲಾಯಿತು.

ಮರ, ಕೊಂಬೆಗಳ ತೆರವು
ವಿರಾಜಪೇಟೆ-ಮಾಕುಟ್ಟ-ಕಣ್ಣೂರು ರಸ್ತೆಯಲ್ಲಿ ಅಪಾಯದ ಹಂಚಿನಲ್ಲಿ ರುವ ಮರಗಳ ಕೊಂಬೆಗಳನ್ನು ಮತ್ತು ಬಿದ್ದಿರುವ ಮರಗಳನ್ನು ಮಳೆಗಾಲ ಪ್ರಾರಂಭಕ್ಕೆ ಮುನ್ನ ತೆರವುಗೊಳಿಸುವ ಕಾರ್ಯವನ್ನು ಅದಾಗಲೆ ಅರಣ್ಯ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ.

ನದಿ ಹರಿ ವಿನ ಅಡೆ ತಡೆ ನಿವಾರಣೆ- ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬರುವ ಕೊಯನಾಡಿನ ಗಣಪತಿ ದೇವಸ್ಥಾನದ ಸಮೀಪವಿರುವ ಹೊಳೆಯಲ್ಲಿ ಭೂಕುಸಿತದಿಂದ ಮಣು ತುಂಬಿಕೊಂಡಿತ್ತು. ಮಣ್ಣು ಹಾಗೂ ಬಂಡೆ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next