Advertisement

Politics: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

01:04 AM Sep 21, 2023 | Team Udayavani |

ಬೆಂಗಳೂರು: ಮತದಾರರಿಗೆ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ ಹಂಚಿದ್ದಾಗಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಸಿಎಂ ಸೇರಿದಂತೆ ಇಡೀ ಸರಕಾರವೇ ಅಧಿಕಾರ ಬಿಟ್ಟು ಕೆಳಗಿಳಿಯಬೇಕು ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಆಗ್ರಹಿಸಿವೆ.

Advertisement

ಯತೀಂದ್ರ ಹೇಳಿಕೆಯನ್ನು ಚುನಾವಣ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದರೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಸತ್ಯದ ಸಾಕ್ಷಾತ್ಕಾರವನ್ನು ಸಿಎಂ ಪುತ್ರನೇ ಮಾಡಿಸಿದ್ದು, ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಅಕ್ರಮ ಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರಕಾರವನ್ನು ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಎಕ್ಸ್‌ ಜಾಲತಾಣದಲ್ಲಿ ಒತ್ತಾಯ ಮಾಡಿರುವ ಎಚ್‌ಡಿಕೆ, ಅಪ್ರಜಾಸತ್ತಾತ್ಮಕವಾಗಿ ಗೆದ್ದಿರುವ ಆ ಪಕ್ಷದ ಎಲ್ಲ 135 ಶಾಸಕರನ್ನೂ ಅನರ್ಹಗೊಳಿಸಬೇಕು. ಕೇಂದ್ರ ಸರಕಾರವೂ ಈ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಹಾಗೂ ಈ ಅಕ್ರಮ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಮತದಾರರಿಗೆ ಸಲ್ಲದ ಆಸೆ, ಆಮಿಷ ಒಡ್ಡಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ನಾನು ಪದೇಪದೆ ಹೇಳಿದ್ದೆ. ಗಿಫ್ಟ್‌ ಕೂಪನ್‌, ತವಾ, ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ, ಸೀರೆ ಕೊಟ್ಟ ರಾಜ್ಯ ಕಾಂಗ್ರೆಸ್‌ ಪಕ್ಷದ ಅಸಲಿ ಹಸ್ತದ ಹಕೀಕತ್ತು ಹೀಗಿದೆ ನೋಡಿ. ಸಿಎಂ ಮಗನೇ ರಾಜ್ಯಕ್ಕೆ ಸತ್ಯದ ಸಾಕ್ಷಾತ್ಕಾರ ಮಾಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಪಾವಿತ್ರ್ಯ ಹಾಳು
ಉಳಿದ ಕ್ಷೇತ್ರಗಳ ಕಥೆ ಹಾಗಿರಲಿ, ಕರ್ನಾಟಕದ ಮುಖ್ಯಮಂತ್ರಿಗಳ ಸ್ವಕ್ಷೇತ್ರ ವರುಣಾದಲ್ಲಿಯೇ ಜಾತಿ ಸಮಾವೇಶ ನಡೆಸಿ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆಗಳ ಭರ್ಜರಿ ಸಮಾರಾಧನೆ ನಡೆದಿದೆ. ಸಮಾಜವಾದಿ ಮುಖ್ಯಮಂತ್ರಿಯ ಹಾದಿಯಲ್ಲೇ ನಡೆದಿರುವ ಇಡೀ ರಾಜ್ಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಅದೇ ವಾಮಮಾರ್ಗದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ವಿಧಾನಸೌಧದ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಕೈ ವಿಷಪ್ರಾಶನ
ಚುನಾವಣ ಆಯೋಗ ಈ ಚುನಾವಣ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು. ತನಿಖೆ ನಡೆಸಿ ರಾಜ್ಯ ಕಾಂಗ್ರೆಸ್‌ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಚುನಾವಣ ಕಣದಿಂದ ಹೊರ ಹಾಕಲೇಬೇಕು. ಕೇಂದ್ರ ಸರಕಾರವೂ ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿಷಪ್ರಾಶನ ಮಾಡುವ ಈ ದೇಶದ್ರೋಹಿ ಕೃತ್ಯವನ್ನು ಎಲ್ಲರೂ ತಡೆಯಲೇಬೇಕಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next