ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಐದು ವರ್ಷದಲ್ಲಿ ಏನೂ ಕೆಲಸ ಮಾಡದೇ ಪ್ರಚೋದನಾತ್ಮಕ ಹೇಳಿಕೆಯಿಂದ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರು ತಮ್ಮ ಸಾಧನೆ ಬಿಟ್ಟು ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಅದಕ್ಕೆ ಅವರು ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ಮಾಡಲಿ. ಅದರ ಬದಲು ಪ್ರಚೋದನಾತ್ಮಕ ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಸೂಕ್ತವಲ್ಲ.
ಐದು ವರ್ಷದಿಂದ ಏನೂ ಸಾಧನೆ ಮಾಡದಿರುವುದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. ಹಿಂದಿನ ಐದು ವರ್ಷದಲ್ಲಿ ಅವರು ಏನು ಭರವಸೆ ಕೊಟ್ಟಿದ್ದರೋ ಆ ವಿಷಯ ಈಗ ಪ್ರಸ್ತಾಪಿಸುತ್ತಿಲ್ಲ. ಅದೇ ಅವರ ವೈಫಲ್ಯವನ್ನು ತೋರಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯವರು ಯಾರ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಪ್ರತ್ಯೇಕತೆಯ ಬಗ್ಗೆ ಮಾತನಾಡುವ, ಕಾಶ್ಮೀರದಲ್ಲಿ 370ನೇ ವಿಧಿಯನ್ನು ಬೆಂಬಲಿಸುತ್ತಿರುವ ಪಿಡಿಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದವರಿಗೆ ದೇಶದ ಏಕತೆಯ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ? ಮೋದಿಯವರು ಸಾಧನೆ ಮಾಡದೇ ಜನರ ಭಾವನೆ ಕೆರಳಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ಧಾಳಿ ಮಾಡುವುದನ್ನೇ ಸಾಧನೆ ಮಾಡಿಕೊಂಡಿದ್ದಾರೆ ಎಂದು ದಿನೇಶ್
ಗುಂಡೂರಾವ್ ಆರೋಪಿಸಿದ್ದಾರೆ.