ಬೆಂಗಳೂರು: ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ವರಿಷ್ಠರು ಏಕಾಏಕಿ ಸೂಚಿಸಿದ್ದರಿಂದ ಈ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳುವ ಬಗ್ಗೆ ಗೊಂದಲಕ್ಕೆ ಸಿಲುಕಿದ್ದೇನೆ. ಆದರೆ, ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಸಲಹೆ ಮಾಡಿರುವ ಬಗ್ಗೆ ಅವರು ಭಾನುವಾರ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ವರಿಷ್ಠರಿಂದ ಬಂದಿರುವುದು ನಿಜ. ಈ ಬಗ್ಗೆ ಆಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದ್ದು, ಅಂತಿಮವಾಗಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿಪುರ ಕ್ಷೇತ್ರ ನನಗೆ ರಾಜಕೀಯ ಪುನರ್‌ಜನ್ಮ ನೀಡಿದ ಕ್ಷೇತ್ರ. ನಾನು ಈ ಮಟ್ಟಕ್ಕೆ ಬೆಳೆದಿದ್ದರೆ ಅದು ನನ್ನ ಜಿಲ್ಲೆಯ ಕಾರ್ಯಕರ್ತರ ಪರಿಶ್ರಮದ ಫಲ. ಕ್ಷೇತ್ರ ಬದಲಾವಣೆ ಮಾಡುವ ಬಗ್ಗೆ ನಾನು ಕನಸಿನಲ್ಲಿಯೂ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ವರಿಷ್ಠರು ಏಕಾಏಕಿ ಉತ್ತರ ಕರ್ನಾಟಕದ ಬಗ್ಗೆ ಸೂಚಿಸಿರುವುದರಿಂದ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ ಗೊಂದಲದಲ್ಲಿ ಸಿಲುಕಿದ್ದೇನೆ. ಆದರೆ, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಕೆಲವು ಸಂದರ್ಭಗಳಲ್ಲಿ ಸ್ವಂತ ಹಿತಾಸಕ್ತಿ ಮರೆತು ಕೆಲವೊಂದು ತ್ಯಾಗ ಮಾಡಲೇಬೇಕಾಗುತ್ತದೆ. ಚುನಾವಣೆಗೆ 7 8 ತಿಂಗಳು ಇರುವುದರಿಂದ ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಎಲ್ಲರ ಜತೆ ಚರ್ಚಿಸಿ ವರಿಷ್ಠರ ಸೂಚನೆಗೆ ತಕ್ಕಂತೆ ಸರಿಯಾದ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತಿತರ ಕಡೆ ಸ್ಪರ್ಧಿಸುವಂತೆ ಕಾರ್ಯಕರ್ತರು ಮೊದಲಿನಿಂದಲೂ ಒತ್ತಡ ಹೇರುತ್ತಿದ್ದಾರೆ. ವರಿಷ್ಠರು ಕೂಡ ಉತ್ತರ ಕರ್ನಾಟಕ ಭಾಗದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯೋಚಿಸಿ ಎಂದೂ ಹಿಂದೆ ಹೇಳಿದ್ದರು. ಆದರೆ, ನಾನು ಈವರೆಗೂ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಈಗ ಅಮಿತ್ ಶಾ ಅವರು ಸೂಚನೆ ನೀಡಿದ್ದು, ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಅದನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ ಎಂದು ತಿಳಿಸಿದರು.
ಈ ಮಧ್ಯೆ ತಮ್ಮ ಪುತ್ರ, ಶಿಕಾರಿಪುರ ಕ್ಷೇತ್ರದ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅವರು ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಕೇಳಿಬರುತ್ತಿರುವ ಮಾತುಗಳಿಗೆ ಪ್ರತಿಕ್ರಯಿಸಿದ ಯಡಿಯೂರಪ್ಪ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದರೆ ಆ ಭಾಗದಲ್ಲಿ ರಾಜಕೀಯ ಸ್ವತ್ಛವಾಗುತ್ತದೆ. ಇದಕ್ಕಿಂತ ಹೆಚ್ಚೇನೂ ನಾನು ಹೇಳುವುದಿಲ್ಲ.
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ