ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ದಂಪತಿ ಸಜೀವವಾಗಿ ದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ದುರ್ಘಟನೆಯಲ್ಲಿ ರಾಘವೇಂದ್ರ (39) ಮತ್ತು ಪತ್ನಿ ಶಿಲ್ಪ (35) ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ರಾಘವೇಂದ್ರ ಅವರ ತಂದೆ, ತಾಯಿ ಮತ್ತು ಅವರ ಇಬ್ಬರು ಪುತ್ರರನ್ನು ರಕ್ಷಿಸಲಾಗಿದೆ.
ಬೆಂಕಿಗೆ ಆಹುತಿಯಾದ ಮನೆ ಅಶೋಕಯ್ಯ ಕಾಳಬೆಳಗುಂದಿ ಎಂಬುವರಿಗೆ ಸೇರಿದ್ದಾಗಿದೆ. ಮನೆಯಲ್ಲಿಯೇ ಬಟ್ಟೆ ಅಂಗಡಿಯಿದ್ದು, ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಧಗ ಧಗ ಹೊತ್ತಿ ಉರಿದಿದೆ. ಯಾವುದೇ ಹಂತದಲ್ಲು ಬೆಂಕಿ ಕೆನ್ನಾಲಿಗೆ ಹತೋಟಿಗೆ ಬರಲಿಲ್ಲ. ಒಳಗೆ ಮಲಗಿದ್ದ ದಂಪತಿ ಹೊರಗೆ ಬರಲಾರದೆ ಸಜೀವ ದಹನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.