ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದ ವರ್ತನೆ ತೋರಿ ಕೆಲವೇ ಕ್ಷಣಗಳಲ್ಲಿ ಶಂಕಾಸ್ಪದ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಭದ್ರತಾ ವೈಫಲ್ಯವೇ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಆದರೆ, ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿರುವುದು ಕರ್ತವ್ಯ ಲೋಪಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ನಾಗರಿಕರು ಮೆಟ್ರೋ ಮುಂಭಾಗ ನಿಂತುಕೊಂಡರೂ ಪ್ರಶ್ನಿಸುವ ಅಲ್ಲಿಂದ ತೆರಳುವಂತೆ ಸೂಚಿಸುವ ಸಿಬ್ಬಂದಿ ‘ಬೀಪ್’ ಸದ್ದಾಗಿಸಿದ ವ್ಯಕ್ತಿ ಅಲ್ಲಿಂದ ಕಾಲ್ಕೀಳುವವರೆಗೂ ಎಚ್ಚೆತ್ತುಕೊಳ್ಳುವುದಿಲ್ಲ ಎಂದರೆ ಏನರ್ಥ ಎಂದು ಹೆಸರು ಹೇಳಲು ಇಚ್ಛಿಸದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅಸಮಾಧಾನವ್ಯಕ್ತಪಡಿಸಿದರು.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಖಾಸಗಿ ಏಜೆನ್ಸಿಯ ಸಿಬ್ಬಂದಿ ಮೆಟ್ರೋದ ಭದ್ರತೆಗೆ ನೇಮಕಗೊಂಡಿದ್ದಾರೆ. ಆದರೆ, ಖಾಸಗಿ ಭದ್ರತಾ ಸಿಬ್ಬಂದಿಗೆ ಉಗ್ರರ ಆಗಮನ, ಸಮಾಜಘಾತುಕ ಕೃತ್ಯ ಎಸಗುವವರು ಚಲನವಲನಗಳು ಹೇಗಿರಲಿವೆ ಎಂಬ ಬಗ್ಗೆ ತರಬೇತಿ ನೀಡಲಾಗಿರುತ್ತದೆಯೇ, ಅವರ ಕೌಶಲಗಳೇನು ಎಂಬುದರ ಬಗ್ಗೆಯೂ ಚರ್ಚೆಗೆ ಒಳಪಡಬೇಕಾದ ವಿಚಾರವಾಗಿದೆ ಎಂದರು.
ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್, ಲಕ್ಷಾಂತರ ಜನ ಪ್ರಯಾಣಿಸುವ ಮೆಟ್ರೋನಿಲ್ದಾಣದಲ್ಲಿ ಶಂಕಾಸ್ಪದ ವ್ಯಕ್ತಿ ಪರಾರಿಯಾಗಿ ಮೂರುದಿನಗಳು ಕಳೆದರೂ ಆತನ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ಅವರು ವ್ಯಂಗ್ಯವಾಡಿದರು.
Advertisement
ಪ್ರತಿನಿತ್ಯ ಲಕ್ಷಾಂತರ ಜನ ಓಡಾಡುವ ಮೆಟ್ರೋದಲ್ಲಿ ಮೆಟಲ್ ಡಿಟೆಕ್ಟರ್‌ನಲ್ಲಿ ‘ಬೀಪ್’ ಸದ್ದಾದ ಮೇಲೂ ಆ ವ್ಯಕ್ತಿಯನ್ನು ವಶಕ್ಕೆ ಪಡೆಯದೆ ಮೆಟ್ರೋ ಭದ್ರತಾ ಸಿಬ್ಬಂದಿಯ ಕರ್ತವ್ಯ ಲೋಪ ಕಾರಣ. ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಂತಹ ಕೃತ್ಯ ಹಸಿಯಾಗಿರುವಾಗಲೇ ಮೆಟ್ರೋ ಆಡಳಿತ ಮೆಟ್ರೊ ಹಾಗೂ ನಗರ ಪೊಲೀಸರು ಹೆಚ್ಚು ಅಲರ್ಟ್ ಆಗಿರಬೇಕಾಗಿತ್ತು.
Related Articles
Advertisement
ತೀವ್ರ ಶೋಧ: ಮೆಟ್ರೋನಿಲ್ದಾಣದಿಂದ ತೆರಳಿರುವ ಅನುಮಾನಸ್ಪದ ಪತ್ತೆಗೆ ಹಲವು ಆಯಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೆಜೆಸ್ಟಿಕ್, ರೈಲ್ವೇ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಕ್ರೋಢಿಕರಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ನಾಪತ್ತೆಯಾದ ವ್ಯಕ್ತಿ ಎಲ್ಲಿಂದ ಆಗಮಿಸಿದ. ಒಬ್ಬನೇ ಆಗಮಿಸಿದ್ದನೇ ಅಥವಾ ಆತನ ಸಂಗಡ ಮತ್ಯಾರಾದರು ಆಗಮಿಸಿದ್ದರೇ ಎಂಬ ಮಾಹಿತಿ ಗೊತ್ತಾಗಬೇಕಿದೆ. ಹೀಗಾಗಿ ಒಂದು ಪ್ರತ್ಯೇಕ ತಂಡ ಸಿಸಿಟಿವಿ ಪರಿಶೀಲನೆಯಲ್ಲಿ ತೊಡಗಿದೆ. ಮತ್ತೂಂದು ತಂಡ ಘಟನಾಸ್ಥಳದಲ್ಲಿ ಚಾಲ್ತಿಯಲ್ಲಿದ್ದ ಮೊಬೈಲ್ ಕರೆಗಳನ್ನು ಪರಿಶೀಲನೆ ನಡೆಸುತ್ತಿದೆ. ಉಳಿದ ತಂಡಗಳು ಆತನ ಪತ್ತೆಗೆ ಬೇರೆ ಬೇರೆ ಕಡೆಗೆ ತೆರಳಿವೆ. ಸದ್ಯದಲ್ಲಿಯೇ ಪತ್ತೆಹಚ್ಚುವ ಭರವಸೆಯಿದೆ ಎಂದು ಹಿರಿಯ ಆಧಿಕಾರಿಯೊಬ್ಬರು ತಿಳಿಸಿದರು.
ಸುಳ್ಳು ಸುದ್ದಿ ನಂಬಬೇಡಿ: ರಾಜಧಾನಿಗೆ ಯಾವುದೇ ರೀತಿಯ ಆಗಂತುಕ ವ್ಯಕ್ತಿಗಳು ಭೇಟಿ ನೀಡಿಲ್ಲ. ಈಗಾಗಲೇ ಸಾಕಷ್ಟು ಮುಂಜಾಗ್ರತಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ನಗರ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಅನುಮಾಸ್ಪದ ವ್ಯಕ್ತಿ, ವಸ್ತುಗಳು ಕಂಡು ಬಂದರೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಿನ್ನೆಲೆಯಲ್ಲಿ ಅಮಾಯಕ ವ್ಯಕ್ತಿಯನ್ನು ‘ಉಗ್ರ’ ಎಂದು ಪ್ರತಿಬಿಂಬಿಸಿರುವ ಪ್ರಕರಣ ಬಳಿಕ ರಿಯಾಜ್ ಅಹ್ಮದ್ ಎಂಬ ಅಮಾಯಕ ವಾಚ್ ವ್ಯಾಪಾರಿ ಪೊಲೀಸರಿಗೆ ದೂರು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಶಂಕಾಸ್ಪದ ವ್ಯಕ್ತಿ ಪತ್ತೆ ಇನ್ನೂ ಅಸಾಧ್ಯವಾಗಿದ್ದರೂ, ಆ ವ್ಯಕ್ತಿ ಮೆಟ್ರೋ ಗೇಟ್ ಪ್ರವೇಶಿಸುವ ಮುನ್ನ ಬಂದ ವ್ಯಕ್ತಿಯನ್ನೇ ಮಾಧ್ಯಮವೊಂದು ‘ಶಂಕಿತ’ ಎಂದು ಪ್ರಚಾರ ಮಾಡಿರುವುದೂ ಆ ವ್ಯಕ್ತಿಯ ಚಾರಿತ್ರ್ಯಹರಣಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತರ ತಪಾಸಣೆ ಸ್ವಾಭಾವಿಕ: ಎಂಬಿಪಿ
ಯಾವುದೇ ರೀತಿಯಲ್ಲಿ ಸಂಶಯ ಬಂದರೆ ಸ್ವಾಭಾವಿಕವಾಗಿ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಬೇಕಾಗುತ್ತದೆ. ಇದರಿಂದ ಕೆಲವರಿಗೆ ನೋವಾಗಬಹುದು. ಆದರೆ, ಶಂಕಿತರ ತಪಾಸಣೆ ಅನಿವಾರ್ಯ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಮೆಟ್ರೋ ನಿಲ್ದಾಣದಲ್ಲಿ ಶಂಕಿತರ ತಪಾಸಣೆ ವಿಚಾರ ಕುರಿತಂತೆ ವಿಧಾನಸೌಧದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಭದ್ರತೆ ವಿಚಾರದಲ್ಲಿ ಸಣ್ಣ ತಪ್ಪುಗಳು ಸಹ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತವೆ. ನಾನು ಗೃಹ ಸಚಿವನಾಗಿದ್ದರೂ ನನ್ನನ್ನೂ ತಪಾಸಣೆಗೆ ಒಳಪಡಿಸಬಹುದು. ಅದಕ್ಕೆ ನಾನು ಬೇಡ ಎನ್ನುವುದಿಲ್ಲ. ಭದ್ರತೆ ದೃಷ್ಟಿಯಿಂದ ಪೊಲೀಸರು ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದರೆ ಯಾವುದೇ ಸಮುದಾಯವನ್ನು ಗುರಿಯಾಗಿಸಿ ತಪಾಸಣೆ ನಡೆಸುವುದು ಬೇಡ ಎಂದು ತಿಳಿಸಿದರು.