ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಹಲವಾರು ಬಡಾವಣೆಗಳು ದ್ವೀಪಗಳಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸಿಡಿಲಬ್ಬರದ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶ: ನಲುಗಿಹೋಗಿದ್ದು, ದಸರಾ ಸಂಭ್ರಮಕ್ಕೆ ಅಡ್ಡಿ ಉಂಟು ಮಾಡಿದೆ. ಇದೇ ವೇಳೆ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಸಿಡಿಲಿಗೆ ರೈತನೊಬ್ಬ ಬಲಿಯಾಗಿದ್ದಾನೆ. ಈ ಮಧ್ಯೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ರಾಜ್ಯದಲ್ಲಿಯೇ ಅಧಿಕ, 11 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ಸಿಲಿಕಾನ್ ಸಿಟಿ ತತ್ತರ: ಬೆಂಗೂರಿನಲ್ಲಿ ಮಂಗಳವಾರ ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಶಾಂತಿನಗರ ಸೇರಿದಂತೆ ಹಲವಾರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದು ಹತ್ತಾರು ವಾಹನಗಳು ಜಖಂಗೊಂಡಿವೆ. ಕೃಷ್ಣರಾಜಪುರದ ವಿಧಾನಸಭಾ ಕ್ಷೇತ್ರದ ಭಟ್ಟರಹಳ್ಳಿಯ ಆರ್‌ಎಂಎಸ್ ಕಾಲೋನಿಯ ಮನೆಗೆ ರಾತ್ರಿ ಮಳೆ ನೀರು ನುಗ್ಗಿದ್ದು, ಯುಪಿಎಸ್ ಸಂಪರ್ಕ ಕಡಿತಗೊಳಿಸಲು ತೆರಳಿದ ಜೋಸ್ ಮೀನಮ್ಮ (60) ಎಂಬುವರು ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಾದನಾಯಕನಹಳ್ಳಿಯ ಆಲೂರುಪಾಳ್ಯದಲ್ಲಿ ಗೋಡೆ ಕುಸಿದು ನಾರಾಯಣಪ್ಪ (48) ಎಂಬುವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕೆ.ಆರ್.ಪುರದ ಐಟಿಐ ಕಾಲೋನಿಯ ಮನೆಯೊಂದರಲ್ಲಿ ಶಾರ್ಟ್ ಸರ್ಕ್ನೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯಲ್ಲಿನ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.
ದಸರಾ ಸಂಭ್ರಮಕ್ಕೆ ಅಡ್ಡಿ: ಈ ಮಧ್ಯೆ, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶ: ನಲುಗಿ ಹೋಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ.ನಗರ ಬಹುತೇಕ ಜಲಾವೃತವಾಗಿ ಬಡಾವಣೆಯ ರಸ್ತೆಗಳಲ್ಲಿ ಕಾಲುವೆಯಂತೆ ನೀರು ಉಕ್ಕಿ ಹರಿಯಿತು. ಶ್ರೀರಾಂಪುರ ಬಡಾವಣೆಯ ಹಲವು ಮನೆಗಳು ನೀರಿನಿಂದ ಜಲಾವೃತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ಗಳ ಸಹಾಯದಿಂದ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದರು. ಮರಗಳು ಬಿದ್ದ ಪರಿಣಾಮ ಹುಣಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ದೇವಾಲಯಗಳು ಜಖಂ: ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮನೆಗಳು ಕುಸಿದಿವೆ. 50 ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಳೆಗೆ ಶ್ರೀರಂಗಪಟ್ಟಣದಲ್ಲಿನ ಪುರಾತನ ಕಾಲದ ಆಂಜನೇಯ ಸ್ವಾಮಿ ದೇವಸ್ಥಾನ, ಗಾಮನಹಳ್ಳಿಯ ಮಾರಮ್ಮ, ಮದ್ದೂರು ತಾಲೂಕು ಆಲೂರಿನ ಆಲೂರಮ್ಮ ದೇವಾಲಯದ ಗೋಡೆಗಳು ಕುಸಿದು ಬಿದ್ದಿವೆ. ಶಿಂಷಾ ನದಿ ತುಂಬಿ ಹರಿಯುತ್ತಿದೆ.
ಸಿಡಿಲಿಗೆ ರೈತ ಬಲಿ: ಹುಬ್ಬಳ್ಳಿ, ನವಲಗುಂದ ಸೇರಿದಂತೆ ಧಾರವಾಡ ಜಿಲ್ಲೆಯ ಹಲವೆಡೆಯೂ ಮಳೆಯಾಗಿದ್ದು, ನವಲಗುಂದ ತಾಲೂಕಿನ ದಾಟನಾಳ ಗ್ರಾಮದ ರಂಗಪ್ಪ ಹನಮಪ್ಪ ಬಿರಸೀನ (36) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿಯಿತು. ಇದೇ ವೇಳೆ, ಶಿರಸಿ, ಉಡುಪಿ, ಸುಳ್ಯ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು, ಕರಾವಳಿಯಲ್ಲಿಯೂ ಉತ್ತಮ ಮಳೆಯಾಗಿದೆ.
ಇದೇ ವೇಳೆ ರಾಯಚೂರು ತಾಲೂಕಿನ ಪುಚ್ಚಲದಿನ್ನಿ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ಸಿಡಿಲು ಬಡಿದು ಚಂದ್ರಮ್ಮ (30) ಎಂಬುವರು ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಆಲೂರಿನಲ್ಲಿ ಮಂಗಳವಾರ ತಡರಾತ್ರಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ನಾರಾಯಣ್ಣಪ್ಪ (48) ಎಂಬುವರು ಮೃತಪಟ್ಟಿದ್ದಾರೆ.
ಇನ್ನೆರಡು ದಿನ ಮಳೆ ಸಾಧ್ಯತೆ: ಈ ಮಧ್ಯೆ, ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ, ಉತ್ತರ ಒಳನಾಡಿನ ಹಲವೆಡೆ ಇನ್ನೆರಡು ದಿನ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement