Advertisement

ಸತತ ಮಳೆಯಿಂದ ಬದುಗಳ ನಾಶ: ರೈತರಲ್ಲಿ ಹೆಚ್ಚಿದ ಆತಂಕ

05:39 PM Jun 14, 2017 | Team Udayavani |

ಆಳಂದ: ಜೂನ್‌ 6ರಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬಿತ್ತನೆಗೆ ಮುಂದಾಗಿದ್ದ ರೈತರಿಗೆ ತಡೆಯಾಗಿದೆ. ಬಹುತೇಕವಾಗಿ ಎಲ್ಲೆಡೆ ಹೊಲದ ಬದುಗಳ ನಾಶವಾಗಿ ಮಣ್ಣುಕೊಚ್ಚಿ ಹೋಗಿದ್ದು, ರೈತ ವರ್ಗದಲ್ಲಿ ಚಿಂತೆಗೀಡು ಮಾಡಿದೆ. ಒಡೆದ ಬದು ಕಟ್ಟಲು ಮುಂದಾದರೂ ಬಿಡುವಿಲ್ಲದ ಮಳೆಯಿಂದಾಗಿ ಒಡೆದ ಬದು ಪುನರ್‌ ನಿರ್ಮಾಣಕ್ಕೆ ಸಾಧ್ಯವಾಗುತ್ತಿಲ್ಲ.

Advertisement

ಬದು ನಿರ್ಮಾಣ ಕೈಬಿಟ್ಟರೆ ಹೆಚ್ಚಿನ ಮಳೆಯಾಗಿ ಮತ್ತಷ್ಟು ಹೊಲದ ಮಣ್ಣು ಕೊಚ್ಚಿಹೋಗುವ ಆತಂಕ ಎದುರಾಗಿದೆ. ಶನಿವಾರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸ್ವಲ್ಪ ಮಟ್ಟಿಗೆ ಬಿತ್ತನೆಗೆ ಮುಂದಾಗಿದ್ದ ರೈತರಿಗೆ ಸೋಮವಾರ ಮತ್ತು ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಬಿತ್ತನೆ ನಡೆಯದಂತಾಗಿದೆ. 

ಸತತ ಮಳೆಯಿಂದಾಗಿ ತಾಲೂಕಿನ ಎಲ್ಲ ಹಳ್ಳ, ಚೆಕ್‌ ಡ್ಯಾಂಗಳು ಭರ್ತಿಯಾಗಿ ಹರಿತೊಡಗಿವೆ. ಬತ್ತಿದ ಕೊಳವೆ ಬಾವಿ, ತೆರೆದ ಬಾವಿಗಳಿಗೆ ಅಂತರ್ಜಲ ಹೆಚ್ಚಾಗಿ ನೀರು ಬರತೊಡಗಿದೆ. ಹಲವು ವರ್ಷಗಳ ಬಳಿಕ ಜೂನ್‌ ತಿಂಗಳಲ್ಲಿ ಸಮಪರ್ಕವಾಗಿ ಮಳೆಯಾಗಿದೆ ಎಂಬ ಖುಷಿಯಲ್ಲಿದ್ದ ರೈತರಿಗೆ ಹೊಲದ ಬದುಗಳು ಧ್ವಂಸಗೊಂಡಿರುವುದು ಮತ್ತು ಬಿತ್ತನೆಗೆ ಬಿಡುವು ನೀಡದೆ ಇರುವುದು ಚಿಂತೆಗೀಡು ಮಾಡಿದೆ. 

ಜೂನ್‌ 12ರಂದು ತಾಲೂಕಿನ ಆಯಾ ಮಳೆ ಮಾಪನ ಕೇಂದ್ರಗಳಲ್ಲಿ ಸರಾಸರಿ ಮಳೆಯಾಗಿದೆ. ಆಳಂದ 64.4 ಮಿ.ಮೀ, ಖಜೂರಿ 63.4 ಮಿ.ಮೀ, ನರೋಣಾ 66 ಮಿ.ಮೀ, ನಿಂಬರಗಾ 31 ಮಿ.ಮೀ, ಮಾದನಹಿಪ್ಪರಗಾ 16.0 ಮಿ.ಮೀ, ಸರಸಂಬಾ 36 ಮಿ.ಮೀ, ಕೊರಳ್ಳಿ 58.0 ಮಿ.ಮೀ ಮಳೆಯಾಗಿದೆ ಎಂದು ಶಿರಸ್ತೆದಾರ ರಾಕೇಶ ಶೀಲವಂತ ತಿಳಿಸಿದ್ದಾರೆ.

ಜೂನ್‌ 13ರಂದು ಆಳಂದ 30 ಮಿ.ಮೀ, ಖಜೂರಿ 61.4 ಮಿ.ಮೀ, ನರೋಣಾ 23 ಮಿ.ಮೀ,  ನಿಂಬರಗಾ 33 ಮಿ.ಮೀ, ಮಾದನಹಿಪ್ಪರಗಾ 15.2 ಮಿ.ಮೀ, ಸರಸಂಬಾ 39 ಮಿ.ಮೀ, ಕೊರಳ್ಳಿ 41.2 ಮಿ.ಮೀ ಮಳೆಯಾಗಿದೆ ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next