Advertisement

ದಿಡುಪೆ: ಸಲಗನ ಪುಂಡಾಟಕ್ಕೆ ತತ್ತರಿಸಿದ ಪರ್ಲ -ಮಕ್ಕಿ

11:56 PM Jan 03, 2020 | Sriram |

ಬೆಳ್ತಂಗಡಿ: ವಾರದಿಂದ ದಿಡುಪೆ ಪ್ರದೇಶದ ಸಿಂಗನಾರು, ಪರ್ಲ- ಮಕ್ಕಿ ಪ್ರದೇಶದಲ್ಲಿ ಪ್ರತಿನಿತ್ಯ ಒಂಟಿ ಸಲಗ ಮತ್ತು 3 ಆನೆಗಳ ಹಿಂಡು ದಾಂಧಲೆ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ.

Advertisement

ಕುದುರೆಮುಖ ರಾ. ಉದ್ಯಾನದ ಅಂಚಿನಲ್ಲಿರುವ ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ಪರ್ಲ-ಮಕ್ಕಿ, ಸಿಂಗನಾರು, ನಂದಿ ಕಾಡು, ತಿಮ್ಮಯ ಕಂಡ ಸೇರಿದಂತೆ ಸುಮಾರು 15 ಕಿ.ಮೀ.ಯಲ್ಲಿ ಈ ಆನೆಗಳು ಹಾವಳಿ ನಡೆಸುತ್ತಿದ್ದು, ಬಾಳೆ, ಅಡಿಕೆ, ಗದ್ದೆ ಯನ್ನು ನೆಲಸಮ ಮಾಡಿವೆ.

ಗುರುವಾರ ರಾತ್ರಿಯೂ ಎರು ಮುಡಿ ಮಲ್ಲ ನಡುಗದ್ದೆಯಾಗಿ ಆನೆ ಗಳು ಸಾಗಿವೆ. ಅರಣ್ಯ ಇಲಾಖೆಗೆ ಮನವಿ ನೀಡಿದರೂ ಇತ್ತ ಸುಳಿಯದ ಇಲಾಖೆ 200-300 ಅಡಿಕೆ, ಬಾಳೆ ನಾಶವಾದಲ್ಲಿ 10-15 ಸಾವಿರ ರೂ. ನೀಡಿ ಕೈತೊಳೆಯುತ್ತಿದೆ.

ಬೆಂಕಿ ಹಾಕಿ ಓಡಿಸುವ ಪ್ರಯತ್ನ ವಿಫಲ
ಬೆಂಕಿ ಹಾಕಿ ಓಡಿಸುವ ಪ್ರಯತ್ನಕ್ಕೂ ಆನೆಗಳು ಜಗ್ಗುತ್ತಿಲ್ಲ. ಪಟಾಕಿ ಸಿಡಿಸಿದರೆ ರೊಚ್ಚಿಗೆದ್ದು ದಾಳಿ ನಡೆಸುವ ಅಥವಾ ಮತ್ತಷ್ಟು ಕೃಷಿ ಪ್ರದೇಶಕ್ಕೆ ಹಾನಿ ಮಾಡುವ ಭೀತಿಯಿಂದ ಕೃಷಿಕರು ಮೌನಕ್ಕೆ ಶರಣಾಗುವಂತಾಗಿದೆ.

ಕ್ಯಾಂಪ್‌ ನಡೆಸದ ಇಲಾಖೆ
5 ಕಿ.ಮೀ.ಗೊಂದರಂತೆ
ಕ್ಯಾಂಪ್‌ ನಡೆಸಲು ಸಿಬಂದಿ ನೇಮಿಸಿದಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟ ತಪ್ಪಿಸಬಹುದು. ಆದರೆ 2 ವರ್ಷಗಳಿಂದ ಮನವಿ ಸಲ್ಲಿಸಿದರೂ ಇಲಾಖೆ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಾನಿಯಾಗಿರುವ ಪ್ರದೇಶಗಳು
ಕಜಕೆ, ಗೋಡಾನ್‌ಗುಡ್ಡೆ, ಮಲ್ಲ ಮತ್ತು ಮಡೆಂಜಿಲ ಪಾಡಿ, ತಿಮ್ಮರಕಂಡ,  ಅಡ್ಡೆತ್ತೋಡಿ ಸುತ್ತಮುತ್ತ ವಸಂತಿ ಅವರ 50 ಅಡಿಕೆ ಗಿಡ, ರಾಮಣ್ಣ ಅವರ ನಾಗನ ಬನ, ಸಂಜೀವ ಎಂಬವರ 100ಕ್ಕೂ ಅಧಿಕ ಬಾಳೆ ಗಿಡ, ನಂದಿಕಾಡು ಸಮೀಪ ಕುಡಿಯುವ ನೀರಿನ ಪೈಪ್‌, ಅಡ್ಡತ್ತೋಡಿ ಪರಿಸರದಲ್ಲಿ ಗದ್ದೆ ಪೈರು ನಾಶ ಮಾಡಿವೆ.

ಚಾರ್ಮಾಡಿ ರಸ್ತೆಯಲ್ಲಿ ಪ್ರತ್ಯಕ್ಷ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ಮಧ್ಯಾಹ್ನವೇ ಪ್ರಯಾಣಿಕರಿದ್ದ ಜೀಪಿನ ಮೇಲೆ ಒಂಟಿ ಸಲಗ ಎರಗಲು ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೀಪ್‌ ಚಾಲಕ ರಾಜೇಶ್‌ ಎಂಬವರು ಬಾಂಜಾರು ಬಸ್‌ ನಿಲ್ದಾಣ ಸಮೀಪ ನಿಂತದ್ದನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದರು. ಇದೇ ಸಲಗ ಬೈಕ್‌ ಸವಾರರೊಬ್ಬರ ಮೇಲೂ ದಾಳಿಗೆ ಮುಂದಾಗಿದೆ. ನೆರಿಯ ಕಾಡಿನಿಂದ ಆನೆಗಳು ಬಂದಿರುವ ಸಾಧ್ಯತೆ ಇದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಕೃಷಿಗೆ ಆನೆಗಳ ದಾಳಿ ವಿಚಾರವಾಗಿ ನಮಗೆ ಮಾಹಿತಿ ಇಲ್ಲ. ಕೃಷಿಕರು ಮನವಿ ನೀಡಿದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬಹುದು.
– ಮಂಜುನಾಥ್‌, ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ ಬೆಳ್ತಂಗಡಿ

ಆನೆ ದಾಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಅರ್ಜಿಗಳು ಬರುತ್ತವೆ. 2018-19ರಲ್ಲಿ 16 ಅರ್ಜಿ ಬಂದಿದ್ದು, 15 ಮಂದಿಗೆ 1.90 ಲಕ್ಷ ರೂ. ವಿತರಿಸಲಾಗಿದೆ. 2019-20ರಲ್ಲಿ 11 ಅರ್ಜಿ ಬಂದಿದ್ದು, 5 ಮಂದಿಗೆ 77 ಸಾವಿರ ರೂ. ವಿತರಿಸಲಾಗಿದೆ. ಆನೆ ಕಂದಕ ನಿರ್ಮಾಣ ಮಾಡುವ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
– ಬಿ. ಸುಬ್ಬಯ್ಯ ನಾಯ್ಕ,
ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next