ಮುಂಬಯಿ: ಕೊಲ್ಲಿ ರಾಷ್ಟ್ರದಲ್ಲಿನ ತುಳುವ ಸಂಘ- ಸಂಸ್ಥೆಗಳು ಸಾಗರೋತ್ತರ ತುಳುವರ ಸಹಯೋಗದೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖೀಲ ಭಾರತ ತುಳು ಒಕ್ಕೂಟಗಳ ಸಹಭಾಗಿತ್ವದಲ್ಲಿ ಬರುವ ನ. 23 ಮತ್ತು ನ. 24ರಂದು ದ್ವಿದಿನಗಳಲ್ಲಿ ದುಬಾೖನಲ್ಲಿ ನಡೆಯಲಿರುವ ವಿಶ್ವ ತುಳು ಪರ್ಬ ನಿಮಿತ್ತ ಮುಂಬಯಿನಲ್ಲಿ ಪ್ರಥಮ ಪೂರ್ವಭಾವಿ ಸಭೆ ನಡೆಯಿತು.
ಘಾಟ್ಕೊàಪರ್‌ನ ಮನಿಫೋಲ್ಡ್ ಕಚೇರಿ ಸಮಾಲೋಚನಾ ಸಭಾಗೃಹ ದಲ್ಲಿ ಸೆ. 5ರಂದು ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಗೆ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರಿನ ಆಡಳಿತ ಮೊಕ್ತೇಸರ, ಎಸ್‌ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರು ಧರ್ಮಪಾಲ್ ದೇವಾಡಿಗ ಅವರಿಗೆ ದುಬಾೖ ಪ್ರವಾಸದ ವೀಸಾ ಪ್ರತಿ ಹಸ್ತಾಂತರಿಸಿ ಚಾಲನೆ ನೀಡಿದರು.
ಸಭೆಯಲ್ಲಿ ದುಬಾೖನಲ್ಲಿ ನಡೆಯ ಲಿರುವ ವಿಶ್ವ ತುಳು ಪರ್ಬದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಧರ್ಮಪಾಲ್ ದೇವಾಡಿಗ ಅವರು ಮಾತನಾಡಿ, ಸಾಗರೋತ್ತರ ರಾಷ್ಟ್ರದಲ್ಲಿ ತುಳುವರ ಜಾಗತಿಕ ಸಮ್ಮೇಳನ ಇದೇ ಮೊದಲ ಬಾರಿ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲ್ಪಡಲಿದ್ದು, ತುಳು ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಒಂದು ಅಡಿಪಾಯವಾಗಲಿದೆ. ಅರಬ್ ಸಂಯುಕ್ತ ಸಂಸ್ಥಾನದ ದುಬಾೖಯ ಆಲ್‌ನಸಾರ್ ಲೀಸರ್ ಲ್ಯಾಂಡ್ ಐಸ್‌ರಿಂಗ್ ಒಳಾಂಗಣದಲ್ಲಿ ಎನ್‌ಎಂಸಿ ಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಬಿ. ಆರ್. ಶೆಟ್ಟಿ ಅವರ ಘನಾಧ್ಯಕ್ಷತೆ ಹಾಗೂ ಸರ್ವೋತ್ತಮ ಶೆಟ್ಟಿ ಅವರ ದೂರದೃಷ್ಟಿತ್ವದ ಮತ್ತು ಮುಂದಾಳತ್ವದಲ್ಲಿ ನಡೆಯಲಿರುವ ಸಮಗ್ರ ತುಳುವರ ಸಾಂಘಿಕತೆ ಸಾರುವ ಸಮ್ಮೇಳನ ಆಗಿದೆ. ಭಾರತ ರಾಷ್ಟ್ರಾದ್ಯಂತ ನೆಲೆಯಾದ ತುಳುವರು ಮತ್ತು ತುಳು ಸಂಘಟನೆಗಳ ಮುಂದಾಳುಗಳು ಸೇರಿದಂತೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಮುಂದಾಳುಗಳು ಮತ್ತು ಕರ್ನಾಟಕ ಹಾಗೂ ಕರಾವಳಿ, ತುಳುನಾಡಿನ ನೂರಾರು ಗಣ್ಯರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಇದೀಗಲೇ ನೂರಾರು ತುಳುವರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರೇ ಹೆಸರುಗಳನ್ನು ನೋಂದಾಯಿಸಿದ್ದಾರೆ ಎಂದು ಸಮ್ಮೇಳನದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.
ಸಮಾಜ ಸೇವಕರಾದ ವಿಶ್ವನಾಥ್ ಯು. ಮಾಡಾ, ಎಸ್. ಕೆ. ಶ್ರೀಯಾನ್, ಬಾಲಕೃಷ್ಣ ಪಿ. ಭಂಡಾರಿ, ವಿಶ್ವನಾಥ ರೈ, ನಾಟಕಕಾರ ಸಾ. ದಯಾ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ತುಳು ಅಕಾಡಮಿ ಮಾಜಿ ಸದಸ್ಯ, ಸಂಘಟಕ ಕರ್ನೂರು ಮೋಹನ್ ರೈ ಸ್ವಾಗತಿಸಿ ಮಾತನಾಡಿ, ದೇಶದ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ಇದಾಗಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿಯ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಪಾದರ್ಪಣೆಗೈದು ಸಮ್ಮೇಳನವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಿ ದ್ದಾರೆ ಎಂದು ನುಡಿದರು. ಭಾರತ ತುಳು ಒಕ್ಕೂಟದ ಮಹಾರಾಷ್ಟ್ರ ಘಟಕದ ರೋನ್ಸ್ ಬಂಟ್ವಾಳ್ ವಂದಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರಿಗೆ ಇನ್ನೂ ಒಂದು ವಾರದ ಅವಕಾಶ ಒದಗಿಸಲಾಗಿದೆ. ಹೆಸರು ನೋಂದಾಯಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ಧರ್ಮಪಾಲ್ ದೇವಾಡಿಗ (9322506941) ಕರ್ನೂರು ಮೋಹನ್ ರೈ (9867304757) ರೋನ್ಸ್ ಬಂಟ್ವಾಳ್ (9820292974) ಇವ ರನ್ನು ಸಂಪರ್ಕಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ವಿದೇಶದಲ್ಲಿನ ತುಳು ಮಾತೃಭಾಷಿಗರ ಇಂತಹ ಯೋಚನೆ ಮೆಚ್ಚುವಂತಹದ್ದು. ಹೊರನಾಡಿನಲ್ಲಿ ಇಷ್ಟೊಂದು ದೊಡ್ಡ ಯೋಜನೆಯನ್ನು ಹಮ್ಮಿಕೊಂಡ ಸಾಗರೋತ್ತರ ತುಳುವರ ಸಾಧನೆ ಸ್ತುತ್ಯರ್ಹ. ಇದು ಭಾಷಾ ಭಾವೈಕ್ಯತೆಗೆ ಪೂರಕವಾಗಿದ್ದು ಒಳನಾಡ ತುಳುವರು ಸಕ್ರಿಯವಾಗಿ ಪಾಲ್ಗೊಂಡಾಗಲೇ ಸಮ್ಮೇಳನದ ಉದ್ದೇಶ ಸಾರ್ಥಕವಾಗುವುದು.
ಸುರೇಶ್ ಎಸ್. ಭಂಡಾರಿ, ಆಡಳಿತ ಮೊಕ್ತೇಸರರು: ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು