ಬೇರೂತ್: ವಲಸೆ ಕಾರ್ಮಿಕರನ್ನು ಇಟ್ಟುಕೊಳ್ಳುವುದೇ ಅಥವಾ ಬೇಡವೇ. ಇದು ತೈಲ ಸಮೃದ್ಧ ಗಲ್ಫ್ ದೇಶಗಳಲ್ಲಿ ಈಗ ಬಿಸಿಬಿಸಿ ಚರ್ಚೆಯ ವಿಷಯ. ಬೀದಿ ಬದಿಯ ಪಟ್ಟಾಂಗದಿಂದ ಹಿಡಿದು ಟಿವಿಗಳ ಪ್ಯಾನೆಲ್ ಚರ್ಚೆಗಳ ತನಕ ಎಲ್ಲರ ಗಮನ ಈ ವಿಷಯದ ಮೇಲೆಯೇ ಕೇಂದ್ರೀಕರಿಸಿದೆ.
ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳೆಲ್ಲ ವಲಸೆ ಕಾರ್ಮಿಕರನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ತೈಲ ಬಾವಿಗಳಿಂದ ಎಣ್ಣೆ ಎತ್ತುವುದರಿಂದ ಹಿಡಿದು, ಹೊಟೇಲ್‌ಗಳಲ್ಲಿ ಚಹಾ ಸಪ್ಲಾಯ್ ಮಾಡುವ ತನಕ ಎಲ್ಲೆಡೆ ವಲಸೆ ಕಾರ್ಮಿಕರು ಅನಿವಾರ್ಯ.
ಏಕೆಂದರೆ ಶ್ರೀಮಂತ ಅರಬ್ಬರಿಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಅಭ್ಯಾಸವೇ ಇಲ್ಲ. ಆದರೆ ಕೋವಿಡ್ ವೈರಸ್ ಹಾವಳಿಯ ಸಂದರ್ಭದಲ್ಲಿ ಈ ವಲಸೆ ಕಾರ್ಮಿಕರೇ ಗಲ್ಫ್ ದೇಶಗಳಿಗೆ ಹೊರೆಯಾಗಿ ಪರಿಣಮಿಸಿದ್ದಾರೆ. ಪರಿಹಾರ ಹಾಗೂ ಇನ್ನಿತರ ಪ್ಯಾಕೇಜ್‌ಗಳಲ್ಲಿ ಬಹುಪಾಲು ವಲಸೆ ಕಾರ್ಮಿಕರಿಗೆ ಸಂದಿವೆ. ಗಲ್ಫ್ ದೇಶಗಳಲ್ಲಿ ಕೋವಿಡ್ ಸೋಂಕಿಗೊಳಗಾದವರಲ್ಲೂ ವಲಸೆ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಮುಂದಕ್ಕೆ ವಲಸೆ ಕಾರ್ಮಿಕರನ್ನು ಇಟ್ಟುಕೊಳ್ಳುವುದೇ ಬೇಡವೇ ಎಂಬ ಚರ್ಚೆ ಅಲ್ಲಿ ಪ್ರಾಧಾನ್ಯತೆ ಪಡೆದುಕೊಂಡಿದೆ.
ಗಲ್ಫ್ ದೇಶಗಳ ದೈನಂದಿನ ಬದುಕು ಬಹುತೇಕ ಏಷ್ಯಾ, ಆಫ್ರಿಕ ಮತ್ತು ಇತರ ಬಡ ಅರಬ್ ದೇಶಗಳಿಂದ ವಲಸೆ ಬಂದಿರುವ ಕಾರ್ಮಿಕರನ್ನು ಅವಲಂಬಿಸಿದೆ. ಮನೆ ಪರಿಚಾರಕರಾಗಿ, ಮಾಲ್‌ಗಳ ಉದ್ಯೋಗಿಗಳಾಗಿ , ನಿರ್ಮಾಣ ಕಾರ್ಮಿಕರಾಗಿ ಹೀಗೆ ವಿವಿಧ ರಂಗಗಳಲ್ಲಿ ದುಡಿಯುತ್ತಾ ಈ ವಲಸೆ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ವೈದ್ಯರಾಗಿ, ಉದ್ಯಮಿಗಳಾಗಿ ಹಾಗೂ ಇನ್ನಿತರ ವೈಟ್‌ಕಾಲರ್ ನೌಕರಿಗಳಲ್ಲಿ ನೆಲೆ ಕಂಡುಕೊಂಡವರು ಇದ್ದರೂ ಇವರ ಸಂಖ್ಯೆ ಭಾರೀ ಏನಿಲ್ಲ.
ಇದೀಗ ಒಂದೆಡೆ ಕೋವಿಡ್ ವೈರಸ್ ಹರಡುವ ಭೀತಿ, ಇನ್ನೊಂದೆಡೆ ಪಾತಾಳ ತಲುಪಿರುವ ತೈಲ ಬೆಲೆಯಿಂದಾಗಿ ಆರ್ಥಿಕತೆ ಹಿನ್ನಡೆ ಅನುಭವಿಸುತ್ತಿರುವುದರಿಂದ ಹೆಚ್ಚಿನ ಗಲ್ಫ್ ದೇಶಗಳು ವಲಸೆ ಕಾರ್ಮಿಕರ ಅವಲಂಬನೆಯನ್ನು ಆದಷ್ಟು ಕಡಿಮೆಗೊಳಿಸುವ ಕುರಿತು ಚಿಂತಿಸುತ್ತಿವೆ.
ಇದು ಭಾರತದಂಥ ದೇಶಗಳಿಗೆ ಮಾರಕವಾಗುವ ಸುದ್ದಿ. ಲಕ್ಷಾಂತರ ಮಂದಿ ಗಲ್ಫ್ ದೇಶಗಳಲ್ಲಿ ದುಡಿಯುತ್ತಿದ್ದು, ಅಲ್ಲಿನ ಸರಕಾರಗಳೇನಾದರೂ ವಲಸೆ ಕಾರ್ಮಿಕರನ್ನು ವಾಪಸು ಕಳುಹಿಸುವ ನಿರ್ಧಾರ ಕೈಗೊಂಡರೆ ಆ ಹೊರೆಯನ್ನು ಹೊತ್ತುಕೊಳ್ಳುವಷ್ಟು ಸಾಮರ್ಥ್ಯ ನಮ್ಮ ದೇಶಕ್ಕಿಲ್ಲ. ಭಾರತ ಎಂದಲ್ಲ ಪಾಕಿಸ್ಥಾನ, ಬಾಂಗ್ಲಾದೇಶ ಸೇರಿ ಏಷ್ಯಾದ ಹಲವು ದೇಶಗಳು ಈ ಹೊಡೆತವನ್ನು ಅನುಭವಿಸಲಿವೆ.
ವಿದೇಶಿ ಕಾರ್ಮಿಕರ ಕುರಿತಂತೆ ಗಲ್ಫ್ ದೇಶಗಳಲ್ಲಿ ಒಂದು ರೀತಿಯ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಇದೇ ವೇಳೆ ವಲಸೆ ಕಾರ್ಮಿಕರಿಗೆ ಬದಲಾಗಿ ಪರ್ಯಾಯ ವ್ಯವಸ್ಥೆ ಏನು ಎಂಬ ಪ್ರಶ್ನೆಯೂ ಗಲ್ಫ್ ಆಡಳಿತಗಳನ್ನು ಕಾಡುತ್ತಿದೆ.