ಹುಬ್ಬಳ್ಳಿ: ದ್ವಂದ್ವತೆ, ತುಷ್ಟೀಕರಣ ಎಂಬುದನ್ನು ರಕ್ತದ ಕಣಕಣದಲ್ಲೂ ಇರಿಸುಕೊಂಡಿರುವ ಕಾಂಗ್ರೆಸ್ ನಮ್ಮ ಡಿಎನ್ಎ ಕುರಿತು ಮಾತನಾಡುತ್ತಿದೆ ಎಂಬುದೇ ದುರ್ದೈವ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಂಬೇಡ್ಕರ್, ಡಾ.ಜಗಜೀವನರಾಮ ಅವರಿಗೆ ಅನ್ಯಾಯ ಮಾಡಿದ, ಮುಸ್ಲಿಂರಿಗೆ ಮೀಸಲು ನೀಡಿ ದಲಿತರಿಗೆ ವಂಚನೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ಹಗರಣ ಮಾಡಿದ ಕಾಂಗ್ರೆಸ್ ನಮ್ಮ ಆಡಳಿತದ ಬಗ್ಗೆ ಮಾತನಾಡುತ್ತಿದೆ ಎಂದರು.
ಸೋಲಿನ ಹತಾಶೆಯಿಂದ ಕಾಂಗ್ರೆಸ್ ನವರು ಏನೇನೊ ಮಾತನಾಡುತ್ತಿದ್ದಾರೆ. ಮೋದಿಯವರನ್ನು ಜನ ಒಪ್ಪಿಕೊಂಡಾಗಿದೆ. ಸಮೀಕ್ಷೆಗಳು ಎನ್ ಡಿಎಗೆ 370-380 ಸ್ಥಾನಗಳು ಬರಲಿವೆ ಎಂದಿವೆ. ಇದು ಕಾಂಗ್ರೆಸ್ ಗೆ ದಿಗಿಲು ಮೂಡಿಸಿದೆ ಎಂದರು.
ರಾಜಸ್ಥಾನ, ಛತ್ತೀಸಗಢದಲ್ಲಿ ಇದೇ ಗ್ಯಾರಂಟಿಗಳನ್ನು ಪ್ರಚಾರ ಮಾಡಿದ್ದ ಕಾಂಗ್ರೆಸ್ ಗೆ ಏನಾಯಿತು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಅದೇ ಆಗಲಿದೆ ಎಂದು ಜೋಶಿ ಹೇಳಿದರು.
ಇದೇ ರಣದೀಪ ಸುರ್ಜೇವಾಲಾ ಛತ್ತೀಸಗಢದ ಚುನಾವಣಾ ಉಸ್ತುವಾರಿಯಾಗಿದ್ದರು. ಅಲ್ಲಿ ಏನು ಸಾಧನೆ ಮಾಡದ ಅವರು ಇಲ್ಲಿ ಚಾಣಕ್ಯ ಆಗಲು ಬಂದಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದರು.