ದುಬೈ : ದುಬೈಗೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಪಾಕಿಸ್ಥಾನೀಯರ ಸಂಖ್ಯೆ ಈಚಿನ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವುದನ್ನು ಬಹಿರಂಗಪಡಿಸಿರುವ ಉನ್ನತ ಎಮಿರೇಟ್ ಭದ್ರತಾ ಅಧಿಕಾರಿಯೋರ್ವರು, ಕೊಲ್ಲಿ ಸಮುದಾಯದ ಸದಸ್ಯರಿಗೆ ಪಾಕ್ ಡ್ರಗ್ಸ್ ಪಿಡುಗಿನಿಂದ ಗಂಭೀರ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದುಬೈಯಲ್ಲಿನ ಭದ್ರತಾ ಅಧಿಕಾರಿಗಳ ಈಚಿನ ದಿನಗಳಲ್ಲಿ ದುಬೈ ಒಳಗೆ ಕಾರ್ಯಾಚರಿಸುತ್ತಿರುವ ಹಾಗೂ ಹೊರದೇಶಗಳ ಮುಖ್ಯ ಕಾರ್ಯಾಲಯದಿಂದ ಕಾರ್ಯಾಚರಿಸುತ್ತಿರುವ ಹಲವು ಡ್ರಗ್ ಜಾಲಗಳನ್ನು ಭೇದಿಸಿದ್ದಾರೆ. ಈ ಜಾಲಗಳಲ್ಲಿ ಪಾಕಿಸ್ಥಾನೀಯರೇ ಅಧಿಕ ಸಂಖ್ಯೆಯಲ್ಲಿರುವುದು ಬಹಿರಂಗವಾಗಿದೆ.
ಈ ವಿದ್ಯಮಾನವನ್ನು ಅನುಸರಿಸಿ ದುಬೈ ನ ಸಾಮಾನ್ಯ ಭದ್ರತಾ ದಳದ ಮುಖ್ಯಸ್ಥರಾಗಿರುವ ಲೆ| ಜ| ಧಹೀ ಖಲ್‌ಫಾನ್ ಅವರು ಕೊಲ್ಲಿ ಸಮುದಾಯದ ಸದಸ್ಯರಿಗೆ ಡ್ರಗ್ ಪಿಡುಗಿನ ಅಪಾಯದ ಬಗ್ಗೆ ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
“ನಮ್ಮ ದೇಶಕ್ಕೆ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡಿ ತರುತ್ತಿರುವ ಪಾಕಿಸ್ಥಾನೀಯರು ಕೊಲ್ಲಿ ಸಮುದಾಯದ ಜನರಿಗೆ ಗಂಭೀರ ಬೆದರಿಕೆಯಾಗಿ ಪರಿಣಮಿಸಿದ್ದಾರೆ’ ಎಂದು ಖಲ್‌ಫಾನ್ ಅವರು ಟ್ವಿಟರ್‌ನಲ್ಲಿ ಅರೇಬಿಕ್ ಲಿಪಿಯಲ್ಲಿ ಬರೆದು ಎಚ್ಚರಿದ್ದಾರೆ. ಜತೆಗೆ ಡ್ರಗ್ ಕಳ್ಳಸಾಗಣೆಯಲ್ಲಿ ಈಚೆಗೆ ಸಿಕ್ಕಿ ಬಿದ್ದಿರುವ ಮೂವರು ಪಾಕಿಸ್ಥಾನೀಯರ ಫೋಟೋಗಳನ್ನು ಕೂಡ ಅಪ್‌ಲೋಡ್ ಮಾಡಿದ್ದಾರೆ.