Advertisement

ಪೊಲೀಸ್‌ ದೌರ್ಜನ್ಯ ಖಂಡಿಸಿ ಡಿಎಸ್ಸೆಸ್‌ ಪ್ರತಿಭಟನೆ

06:26 PM Mar 11, 2021 | Nagendra Trasi |

ವಿಜಯಪುರ: ದಲಿತರ ಮೇಲೆ ಪೋಲಿಸ್‌ ಅಧಿಕಾರಿಗಳು ದೌರ್ಜನ್ಯ, ದಬ್ಟಾಳಿಕೆ ನಡೆಸುತ್ತಿದ್ದು ದಲಿತ ಸಂಘಟನೆಗಳ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ರೌಡಿಶೀಟ್‌ ತೆರೆದಿರುವುದನ್ನು ರದ್ದುಪಡಿಸಲು ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ಬುಧವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ರ್ಯಾಲಿ ನಡೆಸಿದ ಸಮಿತಿ ಕಾರ್ಯಕರ್ತರು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ, ಹೋರಾಟಗಾರ ಮಾತನಾಡಿ, ವೈ.ಸಿ. ಮಯೂರ ಮೇಲೆ ಹಿಂದಿನ ಇಂಡಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾಲಿ ಧಾರವಾಡ ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ಎಂ.ಬಿ. ಸಂಕದ ಅವರು ಸುಳ್ಳು ಕೇಸ್‌ಗಳನ್ನು ಹಾಕಿದ್ದಾರೆ. ಈ ಸುಳ್ಳು ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿ, ಎರಡು ಕೇಸ್‌ ರದ್ದು ಪಡಿಸಿದ್ದಲ್ಲದೇ ಪೊಲೀಸ್‌ ಕೃತ್ಯಕ್ಕೆ ಛೀಮಾರಿ ಹಾಕಿದೆ. ಅನ್ಯಾಯ, ಅಸಮಾನತೆ, ವ್ಯವಸ್ಥೆಯಲ್ಲಿ ಸ್ವಾಭಿಮಾನಿ ಹಾಗೂ ನ್ಯಾಯಪರ ವ್ಯಕ್ತಿ ಸಂಘಟನೆಗಳು ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯುವುದು ಸಾಮಾನ್ಯ, ಅನಿವಾರ್ಯ ಮಾತ್ರವಲ್ಲ ಮೂಲಭೂತ, ಮಾನವೀಯ ಕರ್ತವ್ಯ ಎಂದರು.

ಈ ಸಹಜ ಪ್ರತಿಕ್ರಿಯೆ ಹತ್ತಿಕ್ಕುವ ಹಕ್ಕು ಯಾವ ಸರ್ಕಾರ ಹಾಗೂ ಪೋಲಿಸರಿಗೆ ಇಲ್ಲ. ವಿಜಯಪುರ ಜಿಲ್ಲೆಯ ಇಂಡಿ ಉಪ ವಿಭಾಗದ ಡಿವೈಎಸ್‌ಪಿ ಆಗಿದ್ದ ಎಂ.ಬಿ. ಸಂಕದ ತಮ್ಮ ಅಧಿಕಾರದ ಅವಧಿಯಲ್ಲಿ ಅ ಧಿಕಾರ ದುರ್ಬಳಕೆ ಕೃತ್ಯಗಳಲ್ಲೇ ತೊಡಗಿದ್ದರು. ದಲಿತರಿಗೆ ರಕ್ಷಣೆ ನೀಡಬೇಕಾದ ಪೊಲೀಸ್‌ ಅಧಿಕಾರಿ ಸ್ವಯಂ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ತಮ್ಮ ಕರ್ತವ್ಯದ ವ್ಯಾಪ್ತಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಬಹುತೇಕ ಪ್ರಕರಣಗಳಲ್ಲಿ ಬಿ ರಿಪೋರ್ಟ್‌
ಹಾಕಿದ್ದಾರೆ. ಎಸ್ಪಿ ಅವರ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.

ಜಾತಿವಾದಿ, ಡಾ| ಬಿ.ಆರ್‌. ಅಂಬೇಡ್ಕರ್‌ ವಿರೋ ಧಿಯಾಗಿರುವ ಧಾರವಾಡ ಗ್ರಾಮೀಣ ಡಿಎಸ್ಪಿ ಎಂ.ಬಿ. ಸಂಕದ ಅವರನ್ನು ಸೇವೆಯಿಂದ ವಜಾಗೊಳಿಸಿ, ಇವರ ಅವಧಿಯಲ್ಲಿನ ಪ್ರಕರಣಗಳನ್ನು ತನಿಖೆ ನಡೆಸಬೇಕು. ದಲಿತ ಮುಖಂಡರ ಮೇಲೆ ಹಾಕಿರುವ ಸುಳ್ಳು ದೂರುಗಳನ್ನು ಹಿಂಪಡೆಯುವ ಜೊತೆಗೆ, ಆಯುಧ ಲೈಸೆನ್ಸ್‌ ರದ್ದು ಮಾಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಬರುವ ಬುದ್ಧ, ಬಸವ, ಅಂಬೇಡ್ಕರ್‌ ಹಾಗೂ ಗಣ್ಯರ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಜಿಲ್ಲೆಯ ದಲಿತ ಜನರಿಗೆ ಸೂಕ್ತ ರಕ್ಷಣೆ ನೀಡಬೇಕು. ಸರ್ಕಾರ ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಿ ರಾಜ್ಯಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.  ವಿನಾಯಕ ಗುಣಸಾಗರ, ರಮೇಶ ಆಸಂಗಿ, ಸಿದ್ದು ರಾಯಣ್ಣವರ, ರಮೇಶ ದರಣಾಕರ, ಅಶೋಕ ಚಲವಾದಿ, ವೈ.ಸಿ. ಮಯೂರ, ಪ್ರಕಾಶ ಗುಡಿಮನಿ, ಮಂಜು ಯಂಟಮನ, ಪರಸು ದಿಂಡವಾರ, ವಿಜಯ ಕಾಂಬಳೆ, ಶರಣು ಸಿಂಧೆ, ಶಿವಾಜಿ ಮೆಟಗಾರ, ದಸ್ತಗೀರ್‌ ಮುಲ್ಲಾ, ರಾಜು ತೊರವಿ, ಸೋಮು ಮೇಲಿನಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next