Advertisement

ಫ‌ುಟ್ಬಾಲಿಗರ ಮೊಬೈಲ್‌, ಹಣ ದೋಚಿದ ಕಳ್ಳರು!

10:13 AM Mar 17, 2020 | Sriram |

ಹೊಸದಿಲ್ಲಿ: ಫ‌ುಟ್‌ಬಾಲ್‌ ಆಟಗಾರರ ಡ್ರೆಸ್ಸಿಂಗ್‌ ಕೊಠಡಿಯೊಳಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹೊಸದಿಲ್ಲಿಯಲ್ಲಿ ನಡೆದ ಸೀನಿಯರ್‌ ಡಿವಿಷನ್‌ ಲೀಗ್‌ ಫ‌ುಟ್‌ಬಾಲ್‌ ಕೂಟದ ವೇಳೆ ನಡೆದಿದೆ. ಪೊಲೀಸ್‌ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Advertisement

ಏನಿದು ಘಟನೆ?
ದಿಲ್ಲಿ ಫ‌ುಟ್ಬಾಲ್‌ ಸಂಸ್ಥೆ (ಡಿಎಸ್‌ಎ) ಸಹಯೋಗದಲ್ಲಿ ಜವಾಹರ್‌ ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಸೀನಿಯರ್‌ ಡಿವಿಷನ್‌ ಕೂಟವನ್ನು ಆಯೋಜಿಸಲಾಗಿತ್ತು. ಶುಕ್ರವಾರ ದಿಲ್ಲಿ ಯುನೈಟೆಡ್‌ ಕ್ಲಬ್‌ ಹಾಗೂ ಸಿಟಿ ಎಫ್ಸಿ ಕ್ಲಬ್‌ ತಂಡಗಳ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಈ ವೇಳೆ ದಿಲ್ಲಿ ಯುನೈಟೆಡ್‌ ತಂಡದ ಆಟಗಾರರು ತಮ್ಮ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮೊಬೈಲ್‌, ಹಣ, ಎಟಿಎಂ ಹಾಗೂ ಕೆಲವು ಮಹತ್ವದ ದಾಖಲೆಪತ್ರಗಳನ್ನಿರಿಸಿ ಆಟಲು ತೆರಳಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಕಳ್ಳರು ಡ್ರೆಸ್ಸಿಂಗ್‌ ಕೊಠಡಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ!

ಎಫ್ಐಆರ್‌ ದಾಖಲು
ಲೋಧಿ ಕಾಲೋನಿಯ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ದಿಲ್ಲಿ ಯುನೈಟೆಡ್‌ ತಂಡದ ವ್ಯವಸ್ಥಾಪಕ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ದಿಲ್ಲಿ ಫ‌ುಟ್‌ಬಾಲ್‌ ಸಂಸ್ಥೆ ಕೂಡ ಪ್ರತ್ಯೇಕ ತನಿಖೆ ಆರಂಭಿಸಿದೆ. ಈಗಾಗಲೇ ಕೆಲವರನ್ನು ಪೊಲೀಸರು ತನಿಖೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಕ್ರೀಡಾಂಗಣದಲ್ಲಿರುವ ಕೆಲವು ವ್ಯಕ್ತಿಗಳು ಈ ಕೆಲಸದಲ್ಲಿ ತೊಡಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ಮಾತಮಾಡಿದ ದಿಲ್ಲಿ ಫ‌ುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಶಾಜಿ ಪ್ರಭಾಕರನ್‌, “ಇದೊಂದು ಗಂಭೀರ ವಿಷಯ. ಆಟಗಾರರ ಭದ್ರತೆಗೊಂದು ಸವಾಲು. ಇಂತಹ ಘಟನೆ ನಡೆದರೆ ಅವರು ಯಾವ ರೀತಿಯಲ್ಲಿ ಆಡಲು ಸಾಧ್ಯ? ಘಟನೆಯನ್ನು ಪರಿಶೀಲಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ. ಡಿಸಿಪಿ ಹಾಗೂ ಡಿಎಸ್‌ಎ ಅಧಿಕಾರಿಗಳ ಸಭೆಯಲ್ಲಿ ನಮಗೆ ಪೊಲೀಸ್‌ ಇಲಾಖೆಯಿಂದ ಭರವಸೆ ಸಿಕ್ಕಿದೆ’ ಎಂದಿದ್ದಾರೆ.

Advertisement

ಸೂಕ್ತ ಕ್ರಮ ಅಗತ್ಯ
ಇದೇ ಮೊದಲ ಬಾರಿಗೆ ಇಂಥದೊಂದು ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಲು ಡಿಎಸ್‌ಎ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಶಾಜಿ ಪ್ರಭಾಕರನ್‌, “ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕೆಲವೊಂದು ಕಠಿನ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಆಟಗಾರರ ಡ್ರೆಸ್ಸಿಂಗ್‌ ಕೊಠಡಿಗೆ ಯಾವುದೇ ಅನ್ಯ ವ್ಯಕ್ತಿಗಳು ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜತೆಗೆ ಸಿಸಿಟಿವಿ ಅಳವಡಿಸಲಾಗುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next