Advertisement

ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆ

02:17 PM May 26, 2019 | Suhan S |

ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನ ಬೆಳೆಗಳು ನೀರಿಲ್ಲದೆ ಒಣಗಲಾರಂಭಿಸಿವೆ. ಮುಂಗಾರು ಮಳೆ ಆರಂಭವಾಗುವುದರೊಳಗೆ ಒಂದು ಕಟ್ಟು ನೀರನ್ನು ಕೊಟ್ಟು ಬೇಸಿಗೆ ಬೆಳೆ ಸಂರಕ್ಷಣೆ ಮಾಡಿಕೊಡುವಂತೆ ರೈತರು ರಾಜ್ಯ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ.

Advertisement

ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಕೆರೆಗಳಲ್ಲಿ ನೀರಿಲ್ಲ, ಕೊಳವೆ ಬಾವಿಗಳು ಬತ್ತಿಹೋಗಿವೆ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ಇಂತಹ ಸಮಯದಲ್ಲಿ ಬೆಳೆಗಳಿಗೆ ನೀರು ಸಿಗಬೇಕಾದರೆ ಕೃಷ್ಣರಾಜಸಾಗರ ಜಲಾಶಯದಿಂದ ಮಾತ್ರ ಸಾಧ್ಯ ಎನ್ನುವುದು ರೈತರು ಹೇಳುವ ಮಾತು.

11.432 ಟಿಎಂಸಿ: ಕೃಷ್ಣರಾಜಸಾಗರ ಜಲಾಶಯದಲ್ಲಿ 74 ಅಡಿವರೆಗೂ ಬೆಳೆಗಳಿಗೆ ನೀರು ಕೊಟ್ಟಿರುವ ಉದಾಹರಣೆಗಳಿವೆ. ಈಗ ಹಾಲಿ ಅಣೆಕಟ್ಟೆಯೊಳಗೆ 81.44 ಅಡಿ ನೀರಿದೆ. ಜಲಾಶಯಕ್ಕೆ 139 ಕ್ಯುಸೆಕ್‌ ಒಳಹರಿವಿದ್ದು, 348 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯೊಳಗೆ 11.432 ಟಿಎಂಸಿ ಅಡಿ ನೀರಿದೆ.

ಹಾಲಿ ಬೇಸಿಗೆ ಹಂಗಾಮಿನ ಬೆಳೆಗೆ ಒಂದು ಕಟ್ಟು ನೀರು ಕೊಟ್ಟರೂ ಭತ್ತ ಸೇರಿದಂತೆ ಇನ್ನಿತರ ಬೆಳೆಗಳೆಲ್ಲವೂ ರೈತರ ಕೈಸೇರಲಿವೆ. ಹೀಗಾಗಿ ಬೆಳೆಗಳಿಗೆ ಶೀಘ್ರವೇ ನೀರು ಹರಿಸುವಂತೆ ರಾಜ್ಯಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ರೈತರ ಪರದಾಟ: ಈ ಬಾರಿ ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಬಿದ್ದಿಲ್ಲ. ಪೂರ್ವ ಮುಂಗಾರು ಉತ್ತಮವಾಗಿದ್ದರೆ ಬೆಳೆಗಳಿಗೆ ನೀರಿನ ಅವಶ್ಯಕತೆ ಕಂಡುಬರುತ್ತಿರಲಿಲ್ಲ. ಕಳೆದ ವರ್ಷ ಮಾರ್ಚ್‌, ಏಪ್ರಿಲ್, ಮೇ ತಿಂಗಳವರೆಗೆ ಮುಂಗಾರು ಪೂರ್ವ ಮಳೆ ಆಶಾದಾಯಕವಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ವಾಡಿಕೆ ಮಳೆ 8.8 ಮಿ.ಮೀ. ಇದ್ದರೂ 27.3 ಮಿ.ಮೀ. ಮಳೆಯಾಗಿತ್ತು. ಏಪ್ರಿಲ್ನಲ್ಲಿ ವಾಡಿಕೆ ಮಳೆ 49.5 ಮಿ.ಮೀ.ಗೆ 40.1 ಮಿ.ಮೀ. ಮಳೆಯಾಗಿದ್ದರೆ, ಮೇ ತಿಂಗಳಲ್ಲಿ ವಾಡಿಕೆ ಮಳೆ 118.7 ಮಿ.ಮೀ.ಗೆ 223.3 ಮಿ.ಮಿ. ಮಳೆಯಾಗಿತ್ತು. ಈ ಬಾರಿ ಮಳೆಯೇ ಇಲ್ಲದೆ ರೈತರು ಬೆಳೆ ರಕ್ಷಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ.

Advertisement

ಕೆಲವೆಡೆ ಕೊಳವೆ ಬಾವಿಗಳಲ್ಲಿ ಅತಿ ಕಡಿಮೆ ನೀರು ಬರುತ್ತಿದ್ದು, ಅದನ್ನೇ ಬಳಸಿಕೊಂಡು ಬೆಳೆಗಳ ರಕ್ಷಣೆಗೆ ರೈತರು ಮುಂದಾಗಿದ್ದಾರೆ. ಮಳೆಯಾಶ್ರಿತ ಪ್ರದೇಶದ ರೈತರು ಮಳೆಯನ್ನೇ ದಿಟ್ಟಿಸಿ ನೋಡುತ್ತಾ, ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ. ಮುಂಗಾರು ಮಳೆ ಆಗಮನಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಈಗ ನೀರು ಸಿಕ್ಕರೆ ಬೆಳೆ ಪಡೆದುಕೊಂಡು ಮುಂಗಾರು ಹಂಗಾಮಿನ ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ಸರಿಹೋಗಲಿದೆ ಎನ್ನುವುದು ರೈತರ ಲೆಕ್ಕಾಚಾರವಾಗಿದೆ.

ಇನ್ನೊಂದು ಕಟ್ಟು ನೀರು ಹರಿಸಿ: ಬಿಸಿಲಿನ ಹೊಡೆತಕ್ಕೆ ಬೆಳೆಗಳು ನೆಲಕಚ್ಚುತ್ತಿವೆ. ಭೂಮಿ ಕಾದು ಕೆಂಡವಾಗಿದೆ. ಕೆರೆಗಳಲ್ಲಿರುವ ಅಲ್ಪಸ್ವಲ್ಪ ನೀರೂ ಇಂಗಿಹೋಗುತ್ತಿದೆ. ತಾಪಮಾನ ಅಧಿಕವಾಗಿರುವ ಪ್ರಸ್ತುತ ದಿನಗಳಲ್ಲಿ ನಾಲೆಗಳಲ್ಲಿ ನೀರು ಹರಿಸಿ ಅನ್ನದಾತರನ್ನು ರಕ್ಷಣೆ ಮಾಡಬೇಕಿದೆ. ಏ.21ರಿಂದ ಮೇ 8ರವರೆಗೆ ಒಂದು ಕಟ್ಟು ನೀರನ್ನು ಹರಿಸಲಾಗಿದೆ. ಅದೇ ರೀತಿಯಲ್ಲಿಯೇ ಇನ್ನೊಂದು ಕಟ್ಟು ನೀರು ಹರಿಸಿದರೆ ಬೇಸಿಗೆ ಬೆಳೆ ಉಳಿಸಿದಂತಾಗುತ್ತದೆ. ಅತಿ ಶೀಘ್ರದಲ್ಲೇ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next