ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಪ್ರೌಢಶಾಲೆ ಆವರಣದಲ್ಲಿ ಮೂರು ದಿನ ನಡೆಯುವ ಒಣ ಮೆಣಸಿನಕಾಯಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಎಪಿಎಂಸಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ಹಾಗೂ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ.
ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಬಸವರಾಜ ಹೊರಟ್ಟಿ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ಶಿವನಗೌಡರ, ತಾಪಂ ಸದಸ್ಯೆ ಫಕ್ಕೀರಮ್ಮ ಹುಲ್ಲುಂಬಿ, ಕರ್ನಾಟಕ ರಾಜ್ಯ ಸಾಂಬಾರು ಪರ್ದಾಥ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪುರ, ಪ್ರಧಾನ ವ್ಯವಸ್ಥಾಪಕ ಚಿದಾನಂದಪ್ಪ ಪಿ.ಜಿ, ತೋಟಗಾರಿಕೆ ಉಪನಿರ್ದೇಶಕ ರಾಮಚಂದ್ರ ಮಡಿವಾಳರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಬಾಲು ಪಾಟೀಲ್ ಮತ್ತಿತರರು ಇದ್ದರು.
ಮೊದಲ ದಿನವೇ ಉತ್ತಮ ಸ್ಪಂದನೆ: ಮೇಳದಲ್ಲಿ 103 ಮಳಿಗೆಗಳನ್ನು ಹಾಕಲಾಗಿದೆ. ಮೆಣಸಿನಕಾಯಿ ಮಾರಾಟಕ್ಕೆ ಬಂದ ರೈತರಿಗೆ ಮೂರುಸಾವಿರ ಮಠದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ಯಾಡಗಿ ಕಡ್ಡಿ, ಬ್ಯಾಡಗಿ ಡಬ್ಬಿ ಹಾಗೂ ಡಿಲೆಕ್ಸ್ ಒಣ ಮೆಣಸಿನಕಾಯಿ ಖರೀದಿ ಮೊದಲ ದಿನವೇ ಉತ್ತಮವಾಗಿತ್ತು. ಬ್ಯಾಡಗಿ ಕಡ್ಡಿ ಕೆಜಿಗೆ 240ರಿಂದ 250 ರೂ. ಹಾಗೂ ಬ್ಯಾಡಗಿ ಡಬ್ಬಿಗೆ 340 ರಿಂದ 360 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಡಿಲೆಕ್ಸ್‌ಗೆ 280-360 ರೂ. ವರೆಗೆ, ನೂಲ್ವಿ ಡಬ್ಬಿಗೆ 450-500 ರೂ. ದರ ಇದ್ದದ್ದು ಕಂಡು ಬಂತು.
ಸತತ 10 ವರ್ಷಗಳಿಂದಲೂ ಒಣ ಮೆಣಸಿನಕಾಯಿಗಳನ್ನು ಮೇಳದಲ್ಲಿ ತೆಗೆದುಕೊಂಡು ಹೊಗುತ್ತಿದ್ದೇನೆ. ಒಂದು ವರ್ಷಕ್ಕೆ ನಮ್ಮ ಕುಟುಂಬಕ್ಕೆ ಬೇಕಾದಷ್ಟು ಮೆಣಸಿನಕಾಯಿಯನ್ನು ಮೇಳದಿಂದಲೇ ಖರೀದಿಸುತ್ತೇವೆ.
– ಗೀತಾ ಕಾವಟೆ, ಗೋಕುಲ ರಸ್ತೆ ಹುಬ್ಬಳಿ