ಮಾತು ಬಾರದಿದ್ದರೂ, ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವ ಜಾಣತನವಿತ್ತು. ಕ್ಯಾಮೆರಾ ಮುಂದೆ ನಿಂತರೆ, ಯಾವ ನಟನಿಗೂ ಕಮ್ಮಿ ಇಲ್ಲದಂತೆ, ನಟಿಸಿ ತೋರಿಸುತ್ತಿದ್ದರು. ಮೈದಾನಕ್ಕಿಳಿದರೆ ಬೌಲರ್ ಎಸೆಯುವ ಬಾಲನ್ನು ಬೌಂಡರಿಗೆ ಅಟ್ಟುತ್ತಿದ್ದರು. ಎದುರಾಳಿ ಬ್ಯಾಟ್ ಹಿಡಿದು ನಿಂತರೆ, ನೇರ ವಿಕೆಟ್‌ಗೆ ಬಾಲ್ ಎಸೆದು ಸಂಭ್ರಮಿಸುವುದರ ಜತೆಗೆ ಇಡೀ ಕ್ರೀಡಾಂಗಣದಲ್ಲೇ ಸಂಭ್ರಮದ ಹೊನಲು ಎಬ್ಬಿಸುತ್ತಿದ್ದರು. ಧ್ರುವಶರ್ಮ ಅವರಿಗೆ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಡಿವಿಷನ್ ಕ್ರಿಕೆಟ್‌ನಲ್ಲಿ ಆಟವಾಡಿದ್ದ ಅವರು ಸಿಸಿಎಲ್
(ಸೆಲೆಬ್ರಿಟಿ ಕ್ರಿಕೆಟ್ ಲೀಗ್)ನಲ್ಲೂ ಸೈ ಎನಿಸಿಕೊಂಡಿದ್ದರು.
Advertisement
ಬೆಂಗಳೂರಲ್ಲೇ ಹುಟ್ಟಿ ಬೆಳೆದ ಧ್ರುವಶರ್ಮ, ನಟ, ನಿರ್ಮಾಪಕ ಸುರೇಶ್ ಶರ್ಮ ಅವರ ಪುತ್ರ. ಅಪ್ಪನ ಹಾಗೆ ತಾನೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಧ್ರುವ, “ಸ್ನೇಹಾಂಜಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಕಿವಿ ಕೇಳದ, ಮಾತೂ ಬಾರದ ಧ್ರುವ ಶರ್ಮ ಹೇಗೆ ಕ್ಯಾಮೆರಾ ಮುಂದೆ ನಟಿಸಬಲ್ಲರು ಎಂಬ ಪ್ರಶ್ನೆಗಳು ಎದುರಾದರೂ, ಅವುಗಳಿಗೆಲ್ಲಾ ತಮ್ಮ ನಟನೆ ಮೂಲಕ ಉತ್ತರ ಕೊಟ್ಟುಶಹಭಾಷ್ ಎನಿಸಿಕೊಂಡಿದ್ದರು.
ಜಯರಾಮ್, ಚಂದನ್, ರಾಜೀವ್ ಜತೆ ನಟಿಸಿದ್ದರು. ತಂದೆ ಸುರೇಶ್ ಶರ್ಮ ನಿರ್ಮಾಣದ “ತಿಪ್ಪಜ್ಜಿ ಸರ್ಕಲ್’ ಚಿತ್ರದಲ್ಲೂ ಧ್ರುವ ನೇಹಾಪಾಟೀಲ್‌ಗೆ ನಾಯಕರಾಗಿ ನಟಿಸಿದ್ದರು. “ಕಿಚ್ಚು’ ಎಂಬ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಿದೆ. ಧ್ರುವ ಅವರಿಗೆ ನಟನೆ ಮೇಲೆ ಎಷ್ಟು ಪ್ರೀತಿ ಇತ್ತೋ, ಅದಕ್ಕಿಂತ ಹೆಚ್ಚು ಕ್ರಿಕೆಟ್ ಮೇಲೂ ಇತ್ತು. ನಟನೆ ಜತೆಗೆ ಕ್ರಿಕೆಟ್‌ಗೂ ಹೆಚ್ಚು ಆದ್ಯತೆ
ಕೊಟ್ಟಿದ್ದರು. ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಧ್ರುವಗೆ ಖಾಯಂ ಸ್ಥಾನ ಇದ್ದದ್ದು ವಿಶೇಷ. ಆ ತಂಡದಲ್ಲಿ ಅಚ್ಚು ಮೆಚ್ಚಿನ ಆಟಗಾರ ಎನಿಸಿಕೊಂಡಿದ್ದ ಧ್ರುವ, ಸುದೀಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜೆಕೆ (ಕಾರ್ತಿಕ್ ಜಯರಾಮ್) ಅವರ ಎರಡು ದಶಕದ ಗೆಳೆಯ ಎಂಬುದು ಮತ್ತೂಂದು ವಿಶೇಷ. ಸಿಸಿಎಲ್‌ನಲ್ಲಿ ಧ್ರುವಶರ್ಮ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಅನೇಕ
ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಪಂದ್ಯ ಗೆಲುವಿಗೂ ಕಾರಣರಾಗಿದ್ದರು. ಚಿತ್ರರಂಗ ಮತ್ತು ಕ್ರಿಕೆಟ್ ಲೋಕದಲ್ಲಿ ತನ್ನದೇ ಸಾಧನೆ ಮಾಡಿದ್ದ ಧ್ರುವಶರ್ಮ ಈಗ ನೆನಪು ಮಾತ್ರ.
Related Articles
ಯಲಹಂಕ: ಚಲನಚಿತ್ರ ನಟ ಹಾಗೂ ಸಿಸಿಎಲ್ ಆಟಗಾರ ಧ್ರುವ ಶರ್ಮಾ ಕೌಟುಂಬಿಕ ಕಲಹ ಮತ್ತು ವ್ಯವಹಾರದಲ್ಲಿ ನಷ್ಟ ಹೊಂದಿದ್ದ
ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ರಾಜಾನುಕುಂಟೆ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ರಾಜಾನುಕುಂಟೆಯ ಪ್ರಸ್ಟೀಜ್ ಓಯಾಸಿಸ್‌ನ ವಿಲ್ಲಾಸ್ ನಂ.3ರಲ್ಲಿ ವಾಸವಾಗಿದ್ದ ಧ್ರುವಶರ್ಮ ಜುಲೈ 29ರಂದು ರಾತ್ರಿ 9 ಗಂಟೆ ಸುಮಾರಿಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಗಳವಾರ ನಸುಕಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಧ್ರುವ ಶರ್ಮಾ ತಂದೆ ಸುರೇಶ್ ಶರ್ಮಾ, ಪತ್ನಿ ಮತ್ತು 2 ಹಾಗೂ ಐದು ವರ್ಷದ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಧ್ರುವ ಶರ್ಮಾಯಲಹಂಕದ ಲಕ್ಷ್ಮೀಪುರ ಬಳಿಯಲ್ಲಿ ಪಶು ಆಹಾರ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದರು. ನಿರೀಕ್ಷಿತ ಮಟ್ಟದಲ್ಲಿ ಲಾಭ ಸಿಗದ ಹಿನ್ನೆಲೆಯಲ್ಲಿ
ಮಾನಸಿಕವಾಗಿ ನೊಂದಿದ್ದರು. ಇದೇ ವಿಚಾರವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಂದೆ ತಿಳಿಸಿದ್ದಾರೆ.