ಕುಷ್ಟಗಿ: ತಾಲೂಕಿನ ತಾವರಗೇರಾ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದ ಕಾರಿಡಾರ್, ಕುಡುಕರ ಬಾರ್ ಆಗಿದೆ. ಸರ್ಕಾರಿ ವಿದ್ಯಾ ಸಂಸ್ಕೃತಿಯ ಸಂಸ್ಥೆಯ ಅವರಣದಲ್ಲಿ ವಿಕೃತ ಸಂಸ್ಕೃತಿ ಅನಾವರಣಗೊಂಡಿದೆ.
ತಾವರಗೇರಾ ಪಟ್ಟಣದ ಹೊರವಲಯದಲ್ಲಿರುವ ಕಾಲೇಜಿಗೆ ಮೊದಲೇ ಕಂಪೌಡ್ ಗೋಡೆ ಇಲ್ಲ. ಹೀಗಾಗಿ ಕುಡಕುರು ರಾತ್ರಿ ವೇಳೆ ಮದ್ಯದ ಬಾಟಲಿಯೊಂದಿಗೆ ಆಗಮಿಸಿ ಕುಡಿದು ಮಜಾ ಮಾಡುತ್ತಿರುವುದು ತಾವರಗೇರಾ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕಾಲೇಜು ಆವರಣದ ಕಾರಿಡಾರ್ ಕುಡುಕರಿಗೆ ಸಾಕ್ಷತ್ ಬಾರ್ ಆಗಿದೆ.
ಬೆಳಗಾಗುತ್ತಿರುವಂತೆ ಕಾಲೇಜಿನ ಪ್ರಾಚಾರ್ಯ, ಉಪನ್ಯಸಕರು, ಸಿಬ್ಬಂದಿ ವಿದ್ಯಾರ್ಥಿಗಳು ಅವುಗಳನ್ನು ತೆರವುಗೊಳಿಸಿ ಪಾಠ ಪ್ರವಚನ ಶುರು ಮಾಡಬೇಕಿದ್ದು, ಈ ಬೆಳವಣಿಗೆ ಕಾಲೇಜಿನ ಎಲ್ಲರಿಗೂ ಬೇಸರ ತರಿಸಿದೆ. ಕಾಲೇಜು ಆವರಣದಲ್ಲಿ ನಿರ್ಭಿತರಾಗಿ ಮದ್ಯ ಸೇವನೆ ಮಾಡುವುದಲ್ಲದೇ ಅಲ್ಲಿಯೇ ಬಾಟಲಿ ಒಡೆದು ಹಾಕುವ ವಿಕೃತಿಯನ್ನು ಮೆರೆಯುತ್ತಿದ್ದಾರೆ.
ಜೀವನಕ್ಕೆ ಬೆಳಕು ನೀಡುವ ವಿದ್ಯಾಸಂಸ್ಥೆಯಲ್ಲಿ ಮದ್ಯ, ಮಾದಕ ವ್ಯಸನಿಗಳ ಆಟಾಟೋಪಕ್ಕೆ ಕೊನೆ ಇಲ್ಲದಂತಾಗಿದ್ದು, ಈ ಕುಡುಕರಿಗೆ ಪೊಲೀಸರ ಹೆದರಿಕೆ ಇಲ್ಲದಂತಿರುವುದು ವಾಸ್ತವ ಸ್ಥಿತಿ ಸಾಕ್ಷೀಕರಿಸುತ್ತಿದೆ.
ಕುಡಿದ ಬಾಟಲಿ, ಪೌಚ್ ಗಳು, ಕುರುಕಲು ತಿಂಡಿ, ಡ್ರೈ ಫಿಷ್, ಡ್ರೈ ಚಿಕನ್ ತಿಂದು ಪಾರ್ಸಲ್ ಕವರ್ ಅಲ್ಲಿಯೇ ಎಸೆಯುತ್ತಿದ್ದಾರೆ. ಅವುಗಳನ್ನು ಎತ್ತಿ ಹಾಕುವುದು ನಮ್ಮ ಕರ್ಮವಾಗಿದೆ ಎಂದು ಕಾಲೇಜು ಉಪನ್ಯಾಸಕರ ಬೇಸರ ವ್ಯಕ್ತವಾಗಿದೆ.
ಕಾಲೇಜು ಆವರಣದಲ್ಲಿ ಕುಡಿಯುವ ದುರಭ್ಯಾಸದ ಹಿನ್ನೆಲೆ ಸಿಸಿ ಕ್ಯಾಮರಾ ಅಳವಡಿಸಿ ಕುಡುಕರ ಚಲನ ವಲನ ನಿಗಾವಹಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಸಿಪಿಐ ಯಶವಂತ ಬಿಸನಳ್ಳಿ ಪ್ರತಿಕ್ರಿಯಿಸಿ, ಇನ್ಮುಂದೆ ಕಾಲೇಜು ಆವರಣದಲ್ಲಿ ಪೆಟ್ರೋಲಿಂಗ್ ಕ್ರಮ ಕೈಗೊಂಡು ಕುಡುಕರ ಹಾವಳಿ ನಿಯಂತ್ರಿಸಲಾಗುವುದು ಎಂದರು.