ಬೆಂಗಳೂರು: ಕುಡಿತದ ಚಟ ಹತ್ತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ, ಇಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಟನ್‌ಪೇಟೆಯ ಭಕ್ಷಿ ಗಾರ್ಡನ್‌ನಲ್ಲಿ ನಡೆದಿದೆ.
ಮುರುಳಿ (45) ಕೃತ್ಯ ಎಸಗಿ ಮೃತಪಟ್ಟ ವನು. ತಂದೆಯೇ ಇಟ್ಟ ಬೆಂಕಿಯಿಂದ ಹಾಸಿಗೆಯಲ್ಲಿ ನಿದ್ರಿಸುತ್ತಿದ್ದ ಕಾವೇರಿ (21) ಶ್ರೀಕಾಂತ (15) ಅಸುನೀಗಿದ್ದಾರೆ. ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿರುವ ಗೀತಾ (42) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮನೆ ಯಲ್ಲಿ ಮಲಗಲು ಜಾಗವಿಲ್ಲದ ಕಾರಣ ಪಕ್ಕದ ಮನೆಯಲ್ಲಿ ಮಲಗಿದ್ದ ಕಾರ್ತಿಕ್ (19) ತಂದೆಯ ದುಷ್ಕೃತ್ಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಟೀ ಕುಡಿಯಲು ಹೊರಗಡೆ ಎದ್ದು ಹೋಗಿದ್ದಾನೆ. ಬಳಿಕ ಮನೆಯ ಬಳಿ ಬಂದವನೇ ಮಲಗಿದ್ದ ಪತ್ನಿ ಗೀತಾ, ಮಕ್ಕಳಾದ ಶ್ರಿಕಾಂತ, ಕಾವೇರಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯ ಕೆನ್ನಾಲಗೆ ಜ್ವಾಲೆ ಕಂಡು ಸ್ಥಳೀಯರು ಕಿರುಚಿಕೊಂಡಿದ್ದು ಪಕ್ಕದ ಮನೆಯಲ್ಲಿ ಮಲಗಿದ್ದ ಕಾರ್ತಿಕ್
ಕೂಡ ಓಡಿ ಬಂದು ಸ್ಥಳೀಯರ ಜತೆ ಮನೆ ಯೊಳಗಡೆ ನುಗ್ಗಿ ನಾಲ್ವರನ್ನು ಮನೆಯಿಂದ ಹೊರಗಡೆ ನೂಕಿದ್ದಾನೆ. ಅಷ್ಟರಲ್ಲಾಗಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ದುರಂತದಲ್ಲಿ ಶ್ರೀಕಾಂತ್ ಹಾಗೂ ಕಾವೇರಿ ಸ್ಥಳದಲ್ಲಿಯೇ ಮೃತಪಟ್ಟರೆ, ಮುರುಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸತ್ತಿದ್ದಾನೆ. ಗೀತಾ ಅವರ ಸ್ಥಿತಿಯೂ ಚಿಂತಾಜನಕ ವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಕಾವೇರಿ ಪದವಿ ಪೂರ್ಣಗೊಳಿಸಿದ್ದು, ಮನೆಯಲ್ಲಿ ದ್ದರು. ಶ್ರೀಕಾಂತ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಮತ್ತೂಬ್ಬ ಪುತ್ರ ಕಾರ್ತಿಕ್ ಬಿಕಾಂ ವ್ಯಾಸಂಗ ಮಾಡುತ್ತಿ ದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಕುಡಿತದ ಚಟ, ಕೌಟುಂಬಿಕ ಕಲಹ!: ಡಗಿ ಕೆಲಸ ಮಾಡುವ ಮುರುಳಿ ಕುಟುಂಬದ ಜತೆ ಭಕ್ಷಿ ಗಾರ್ಡನ್‌ನಲ್ಲಿ ಮನೆಯಲ್ಲಿ ಕುಟುಂಬದ ಜತೆ ವಾಸವಿದ್ದರು. ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದ ಮುರುಳಿ, ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕುಟುಂಬವನ್ನು ನಿರ್ಲಕ್ಷಿಸುತ್ತಿದ್ದ. ಕುಟುಂಬ ನಿರ್ವಹಣೆಗಾಗಿ ಗೀತಾ ಅವರು ಮನೆಯಲ್ಲಿ ಹೂ ಕಟ್ಟಿ ಮಾರಾಟ ಮಾಡುತ್ತಿದ್ದರು. ಇದಕ್ಕೆ ಮಗಳು ಕಾವೇರಿ ಕೈ ಜೋಡಿಸುತ್ತಿದ್ದರು. ಮುರುಳಿ ಕುಡಿದು ಬಂದು ನಿತ್ಯವೂ ಪತ್ನಿ ಜತೆ ಜಗಳ ಮಾಡು¤ದ್ದ. ಸೋಮವಾರ ಮುಂಜಾನೆ ಟೀ ಕುಡಿಯಲು ಹೊರಗಡೆ ಹೋಗಿ ಬಂದವನು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಮುರುಳಿ ಕೃತ್ಯ ಎಸಗಿದ್ದು ಏಕೆ ಎಂಬುದರ ಬಗ್ಗೆ ನಿಖರವಾಗಿ ಗೊತ್ತಾಗಿಲ್ಲ. ಭಾನುವಾರ ರಾತ್ರಿಯೂ ಆತ ಜಗಳ ಮಾಡಿದ್ದನೇ,
ಕೌಟುಂಬಿಕ ಕಲಹ ಹೊರತುಪಡಿಸಿ ಬೇರೆ ಕಾರಣಗಳಿವೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.