ಸುಳ್ಯ: ಕೋವಿಡ್ ಲಾಕ್ ಡೌನ್ ಕಾರಣದಿಂದ ಸರಿ ಸುಮಾರು ಒಂದೂವರೆ ತಿಂಗಳ ಬಳಿಕ ಇಂದು ರಾಜ್ಯದೆಲ್ಲೆಡೆ ಮದ್ಯದಂಗಡಿಗಳು ಬಾಗಿಲು ತೆರೆದಿದ್ದವು. ಈ ನಡುವೆ ಇಷ್ಟು ದಿವಸ ಎಣ್ಣೆ ಇಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರು ಇಂದು ಬೆಳಿಗ್ಗೆಯಿಂದಲೇ ವೈನ್ ಶಾಪ್ ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು,.
ಇತ್ತ ಸುಳ್ಯದಲ್ಲೊಬ್ಬ ಯುವಕ ವೈನ್ ಶಾಪ್ ನಿಂದ ಮದ್ಯ ಖರೀದಿಸಿ ಆತುರ ತಡೆಯಲಾರದೆ ಅದನ್ನು ದಾರಿ ಮಧ್ಯದಲ್ಲೇ ಸೇವಿಸಿ ಬಳಿಕ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮದ್ಯ ಸೇವಿಸಿದ್ದ ಈ ಯುವಕ ತನ್ನ ಬೈಕ್ ನಲ್ಲಿ ಚೆನ್ನಕೇಶವ ದೇವಸ್ಥಾನದ ಒಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಈತನ ಬೈಕ್ ನಿಯಂತ್ರಣ ತಪ್ಪಿ ಕಂಪೌಂಡೊಂದಕ್ಕೆ ಢಿಕ್ಕಿ ಹೊಡೆದಿದೆ.
ಬಳಿಕ ಯುವಕ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಆತನ ಮುಖ, ಕೈಗಳಲ್ಲಿ ತರಚಿದ ಗಾಯಗಳಾಗಿವೆ. ಯುವಕ ರಸ್ತೆ ಬದಿ ಬಿದ್ದಿರುವುದನ್ನು ಆ ರಸ್ತೆಯಲ್ಲಿ ಬಂದ ಬೇರೆ ಇಬ್ಬರು ಗಮನಿಸಿ ಬೈಕ್ ಅಪಘಾತವಾಗಿರಬಹುದೆಂದು ಭಾವಿಸಿ ಆತನನ್ನು ಎಬ್ಬಿಸಲು ಹೋಗಿದ್ದ ಸಂದರ್ಭದಲ್ಲಿ ಅರೆ ಪ್ರಜ್ಞೆಯಲ್ಲಿದ್ದ ಆತ ಅವರಿಗೆ ಗದರಿದ್ದಾನೆ ಎನ್ನಲಾಗಿದೆ.
ಬಳಿಕ ಪರಿಶೀಲಿಸದಾಗ ಆ ಯುವಕನ ಬ್ಯಾಗ್ ನಲ್ಲಿ ಮದ್ಯದ ಬಾಟಲಿ ಇತ್ತು. ವೈನ್ ಶಾಪ್ ನಿಂದ ಮದ್ಯ ಖರೀದೀಸಿ ಬೇರೆಡೆ ಅದನ್ನು ಕುಡಿದು ಬೈಕ್ ಚಲಾಯಿಸಿಕೊಡು ಬರುವಾಗ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬೇಕೆಂದು ಎನ್ನಲಾಗಿದೆ. ಬಳಿಕ ಯುವಕನನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬೈಕ್ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.