ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಖಾಸಗಿ ಟ್ರಾವೆಲ್ಸ್ನ ಮೂವರು ಸಹೋದ್ಯೋಗಿಗಳ ನಡುವೆ ಉಂಟಾದ ಜಗಳ ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಮೂಲದ ನಾಗೇಶ್(52) ಮತ್ತು ಮಂಡ್ಯ ಮೂಲದ ಮಂಜೇಗೌಡ(44)ಕೊಲೆಯಾ ದವರು. ಬೆಂಗಳೂರು ಉತ್ತರ ತಾಲೂಕಿನ ಸಿಂಗಳ್ಳಿ ಗ್ರಾಮದ ಎಸ್ಆರ್ಎಸ್ ಕಂಪನಿಯ ವಾಷಿಂಗ್ ಮತ್ತು ಕ್ಲೀನಿಂಗ್(ವರ್ಕ್ಶಾಪ್) ಕೇಂದ್ರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಕಂಪನಿಯ ಬಸ್ ಚಾಲಕ ಸುನೀಲ್ ಶನಿವಾರ ಬೆಳಗ್ಗೆ ಕೇಂದ್ರಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಕೃತ್ಯ ಎಸಗಿದ್ದಾನೆ ಎನ್ನಲಾದ ಸಹೋದ್ಯೋಗಿ ಸುರೇಶ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ರಾಮನಗರದ ಮೂಲದ ನಾಗೇಶ್ ಮತ್ತು ಮಂಡ್ಯ ಮೂಲದ ಮಂಜೇಗೌಡ 2 ವರ್ಷಗಳಿಂದ ಸಿಂಗಳ್ಳಿಯಲ್ಲಿರುವ ಎಸ್ಆರ್ಎಸ್ ಕಂಪನಿಗೆ ಸೇರಿದ ವಾಷಿಂಗ್ ಮತ್ತು ಕ್ಲೀನಿಂಗ್(ವರ್ಕ್ಶಾಪ್) ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಕೃತ್ಯ ಎಸಗಿದ್ದಾನೆ ಎನ್ನಲಾದ ಸುರೇಶ್, 4 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ. ಮೂವರು ಕೇಂದ್ರದಲ್ಲಿರುವ ಕಾರ್ಮಿಕರ ಶೆಡ್ನಲ್ಲಿ ವಾಸವಾಗಿದ್ದರು.
ಶುಕ್ರವಾರ ತಡರಾತ್ರಿ ಮೂವರು ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ಜಗಳ ಉಂಟಾಗಿದೆ. ಅದು ವಿಕೋಪಕ್ಕೆ ಹೋದಾಗ ಸುರೇಶ್ ಎಂಬಾತ, ನಾಗೇಶ್ ಮತ್ತು ಮಂಜೇಗೌಡನ ಮೇಲೆ ಕಬ್ಬಿಣ ರಾಡ್ನಿಂದ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
ಬಸ್ ಚಾಲಕ ಬಂದಾಗ ಘಟನೆ ಬೆಳಕಿಗೆ: ಎಸ್ಆರ್ಎಸ್ ಬಸ್ ಚಾಲಕ ಸುನೀಲ್ ಕುಮಾರ್ ಶನಿವಾರ ಬೆಳಗ್ಗೆ ಬಸ್ ಕ್ಲೀನಿಂಗ್ ಮಾಡಿಸಲು ವರ್ಕ್ಶಾಪ್ಗೆ ಬಂದಿದ್ದಾರೆ. ಆದರೆ, ಕೇಂದ್ರದಲ್ಲಿ ಯಾವ ಕಾರ್ಮಿಕರು ಇರಲಿಲ್ಲ. ಹೀಗಾಗಿ ಬಸ್ ಚಾಲಕರು ವಿಶ್ರಾಂತಿ ಪಡೆಯುವ ಕೋಣೆಯ ಬಾಗಿಲು ತೆರೆದಾಗ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಟ್ರಾವೆಲ್ಸ್ನ ಮೇಲ್ವಿಚಾರಕನಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ನಾಗೇಶ್ ಪುತ್ರಿ ಸಹನಾ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದಾಗ ಶೆಡ್ನಲ್ಲಿ ನಾಗೇಶ್ನ ಮುಖ ಮತ್ತು ತಲೆಗೆ ಹಾಗೂ ಮಂಜುಗೌಡನ ಮೂಗು, ಬಾಯಿ ಹಾಗೂ ತಲೆಗೂ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಈ ಸಂಬಂಧ ನಾಗೇಶ್ ಪುತ್ರಿ ಸಹನಾರಿಂದ ದೂರು ಪಡೆದು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್, ಸಂಪಿಗೆಹಳ್ಳಿ ಉಪವಿಭಾಗದ ಎಸಿಪಿ ಹಾಗೂ ಬಾಗಲೂರು ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.