ಬೆಂಗಳೂರು: ನಗರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಅವುಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ವಾರಾಂತ್ಯದಲ್ಲಿ ಮಾತ್ರ ಡ್ರಂಕ್ ಆ್ಯಂಡ್ ಡ್ರೈವ್ ತಪಾ ಸಣೆ ಮಾಡುತ್ತಿದ್ದ ಸಂಚಾರ ಪೊಲೀಸರು ಇದೀಗ ವಾರಕ್ಕೆ ನಾಲ್ಕು ದಿನಗಳ ಕಾಲ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಯ ಪಿಎಸ್‌ಐಗಳಿಂದ ವಿಶೇಷ ಕಾರ್ಯಾಚರಣೆ ಮಾಡುವುದು, ಸಿಸಿ ಕ್ಯಾಮೆರಾಗಳಿರುವ ಜಂಕ್ಷನ್‌ಗಳಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸುವಾಗ ಮಹಿಳಾ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗಿದೆ.
ಈ ಹಿಂದೆ ವಾರಾಂತ್ಯದಲ್ಲಿ ಮಾತ್ರ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾತ್ರಿ ವೇಳೆ ರಸ್ತೆ ಅಪಘಾತಗಳು ಹಾಗೂ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರಿಂದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಸಂಜೆ ಬಳಿಕ ಆಲ್ಕೋಮೀಟರ್ ಮೂಲಕ ಪ್ರತಿ ವಾಹನ ಸವಾರನ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದರೊಂದಿಗೆ ಕೆಲ ಸೂಚನೆಗಳನ್ನು ನೀಡಲಾಗಿದ್ದು, ಮಹಿಳೆಯರು ಇದ್ದ ವಾಹನ ಅಪಘಾತದ ಕುರಿತು ದೂರುಗಳು ಬಂದಲ್ಲಿ ತಕ್ಷಣ ಸ್ಪಂದಿಸಬೇಕು. ಮಹಿಳಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ಹಾಗೂ ಬೆಳಗಿನ ಜಾವದಲ್ಲಿ ವ್ಹೀಲಿಂಗ್ ಮಾಡುವ ಸ್ಥಳಗಳು ಗುರುತಿಸಬೇಕು. ಮುಂಜಾಗ್ರತಾ ಕ್ರಮಗಳೊಂದಿಗೆ ನಿಗಾವಹಿಸುವುದು. ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿರುವ ಸಿಗ್ನಲ್ ಲೈಟ್‌ಗಳು, ಸಿಸಿ ಕ್ಯಾಮೆರಾಗಳು ಹಾಗೂ ಸರ್ಕಾರಿ ಸ್ವತ್ತುಗಳ ಬಗ್ಗೆ ಗಸ್ತು ವೇಳೆ ನಿಗಾವಹಿಸಬೇಕು ಸೇರಿದಂತೆ ಹತ್ತಾರು ಸೂಚನೆಗಳನ್ನು ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.