ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು. ಭಾಗ್ಯ (ಕೆ.ಡಿ.ಎಮ್-01), ಪಿ.ಕೆ.ಎಮ್-01, ಧನರಾಜ್ (ಸೆಲೆಕ್ಷನ್ 64) ಮತ್ತು ಜಿ.ಕೆ.ವಿ.ಕೆ- 2, 3 ಎಂಬ ಗಿಡ್ಡ ತಳಿಗಳಿವೆ. ಎಕರೆಗೆ 100 ಗ್ರಾಂ ಬೀಜ ಹಾಗೂ ಸಸಿಗಳಾದಲ್ಲಿ 370 ಬೇಕಾಗುತ್ತದೆ. ಪ್ರತಿ ಸಸಿಯನ್ನು 3.25 ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿಯಾದ 65ರಿಂದ 70ನೇ ದಿನಕ್ಕೆ ಗಿಡದ ಮುಖ್ಯ ತುದಿಯನ್ನು ಚಿವುಟುವುದರಿಂದ ಗಿಡಗಳ ಕವಲುಗಳು ಹೆಚ್ಚಾಗಿ ಒಡೆದು ಇಳುವರಿ ಹೆಚ್ಚುವುದು. ಅಲ್ಲದೆ, ಗಿಡದ ಎತ್ತರ ಕಡಿಮೆಯಾಗಿ ಕಾಯಿಗಳನ್ನು ಕಟಾವು ಮಾಡಲು ಅನುಕೂಲವಾಗುತ್ತದೆ. ನಾಟಿ ಮಾಡಿದ 90 ದಿನಗಳ ನಂತರ ಎಕರೆಗೆ 5 ಕೆ.ಜಿ ಸಾರಜನಕ, 25 ಕೆ.ಜಿ. ರಂಜಕ, 6 ಕೆ.ಜಿ. ಪೊಟ್ಯಾಷ್ ರಸಗೊಬ್ಬರ ಮತ್ತು 10 ಟನ್ ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು. ಇದೇ ಪ್ರಮಾಣದ ಗೊಬ್ಬರವನ್ನು ಮತ್ತೆ 90 ದಿನಗಳ ನಂತರ ಒದಗಿಸಬೇಕು. ನೆಟ್ಟ 8ನೇ ತಿಂಗಳಿನಿಂದ ಈ ಗಿಡ್ಡ ತಳಿಗಳು, ಹೂ ಮತ್ತು ಕಾಯಿಗಳನ್ನು ಬಿಡಲು ಆರಂಭಿಸುತ್ತವೆ. ಈ ತಳಿಗಳಲ್ಲಿ ಎರಡು ವರ್ಷಗಳ ನಂತರ ಪ್ರತಿ ಗಿಡದಿಂದ 200- 250 ಕಾಯಿಗಳು ದೊರೆಯುತ್ತವೆ. ನುಗ್ಗೆ ಸೊಪ್ಪನ್ನು ತರಕಾರಿಯಾಗಿ ಹಾಗೂ ಔಷಧಿಗಾಗಿಯೂ ಬಳಸುವುದರಿಂದ ಅವುಗಳಿಗೂ ತುಂಬಾ ಬೇಡಿಕೆ ಇದೆ.
ಒಂದು ಎಕರೆ ಜಮೀನಿನಲ್ಲಿ ನುಗ್ಗೆ ಬೇಸಾಯ ಮಾಡಬೇಕೆಂದುಕೊಂಡಿದ್ದೇನೆ. ಗಿಡದ ಕವಲುಗಳು ಹೆಚ್ಚು ಒಡೆಯಲು ಮತ್ತು ಕಟಾವಿಗೆ ಸುಲಭವಾಗುವಂತೆ ಗಿಡಗಳ ಎತ್ತರ ಕಡಿಮೆಯಾಗಲು ಏನು ಮಾಡಬೇಕು?
– ಮಸಕ್ ಸಾಬ ಹಿಟ್ನಾಳ, ಪ್ರಗತಿಪರ ರೈತ, ವಿಜಯಪುರ
– ಡಾ. ಅಶೋಕ ಪಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು,
ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ