Advertisement

ನುಗ್ಗೆಸೊಪ್ಪು ಸ್ಪೆಷಲ್‌

09:11 PM Sep 26, 2019 | mahesh |

ನುಗ್ಗೆ ಸೊಪ್ಪಿನ ಪಲ್ಯವನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ರೋಗ ಉಲ್ಬಣಿಸುವುದಿಲ್ಲ. 1 ಚಮಚ ನುಗ್ಗೆಸೊಪ್ಪಿನ ರಸವನ್ನು ದಿನಕ್ಕೆ 2 ಬಾರಿ ಮಕ್ಕಳಿಗೆ ಕೊಡುವುದರಿಂದ “ಇರುಳುಗಣ್ಣು’ ಕಾಯಿಲೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ.

Advertisement

ನುಗ್ಗೆಸೊಪ್ಪು ಸಾರು
ಬೇಕಾಗುವ ಸಾಮಗ್ರಿ: 2 ಕಪ್‌ ಸಣ್ಣಗೆ ಹೆಚ್ಚಿದ ನುಗ್ಗೆಸೊಪ್ಪು , ಕಡಲೆಗಾತ್ರದ ಇಂಗು, 1/2 ಕಪ್‌ ತೆಂಗಿನ ತುರಿ, 1/2 ಚಮಚ ಜೀರಿಗೆ, 4-5 ಒಣಮೆಣಸು, 1 ಕಪ್‌ ಬೇಯಿಸಿದ ತೊಗರಿಬೇಳೆ, 1 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಚಮಚ ಎಣ್ಣೆ , 1 ಎಸಳು ಕರಿಬೇವು, 1/2 ಚಮಚ ಕೆಂಪುಮೆಣಸಿನ ಚೂರು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ನುಗ್ಗೆ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ 6 ಕಪ್‌ ನೀರು, ಉಪ್ಪು , ಇಂಗು ಹಾಕಿ ಬೇಯಿಸಿ. ತೊಗರಿ ಬೇಳೆಯನ್ನು ಬೇರೆಯೇ ಬೇಯಿಸಿ. ತೆಂಗಿನ ತುರಿಗೆ ಒಣಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಸೊಪ್ಪಿಗೆ ಬೆರೆಸಿ. ನಂತರ ಬೆಂದ ತೊಗರಿಬೇಳೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಸೇರಿಸಿ ಒಗ್ಗರಣೆ ಹಾಕಿ. ಚಪಾತಿಗೆ, ಊಟಕ್ಕೆ ಬಳಸಬಹುದು.

ನುಗ್ಗೆಸೊಪ್ಪಿನ ಗಸಿ
ಬೇಕಾಗುವ ಸಾಮಗ್ರಿ: 4 ಕಪ್‌ ಎಳೆ ನುಗ್ಗೆಸೊಪ್ಪು, 1 ಕಪ್‌ ತೊಗರಿಬೇಳೆ, 5-6 ಒಣಮೆಣಸು, 1/2 ಕಪ್‌ ತೆಂಗಿನ ತುರಿ, 2 ಚಮಚ ಕೊತ್ತಂಬರಿ, 1 ಚಮಚ ಜೀರಿಗೆ, 1 ಎಸಳು ಕರಿಬೇವು, 1/4 ಚಮಚ ಅರಸಿನ ಪುಡಿ, ಬೆಲ್ಲ ನೆಲ್ಲಿಕಾಯಿ ಗಾತ್ರ, ಹುಳಿ- ನೆಲ್ಲಿಕಾಯಿ ಗಾತ್ರ, 1 ಚಮಚ ಎಣ್ಣೆ , 1/2 ಚಮಚ ಸಾಸಿವೆ, ಇಂಗು, ಕರಿಬೇವು ಸ್ವಲ್ಪ.

ತಯಾರಿಸುವ ವಿಧಾನ: ತೊಗರಿಬೇಳೆಯನ್ನು ಬೇಯಿಸಿಡಿ. ನಂತರ ನುಗ್ಗೆಸೊಪ್ಪು, ಹುಳಿ, ಉಪ್ಪು , ಬೆಲ್ಲ ಸೇರಿಸಿ ಬೇಯಿಸಿ. ನಂತರ ಕಾಯಿತುರಿ, ಕೊತ್ತಂಬರಿ, ಜೀರಿಗೆ, ಒಣಮೆಣಸು ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಮಿಶ್ರಣಕ್ಕೆ ಸೇರಿಸಿ ಕುದಿಸಿ. ಸಾಸಿವೆ, ಇಂಗು ಒಗ್ಗರಣೆ ಹಾಕಿ ಕರಿಬೇವು ಹಾಕಿ ಮುಚ್ಚಿಡಿ. ಈ ಗಸಿ ಸಾಂಬಾರಿಗಿಂತ ಸ್ವಲ್ಪ ದಪ್ಪವಿರಲಿ. ಚಪಾತಿಗೆ, ಊಟಕ್ಕೆ ಇದು ರುಚಿಯಾಗಿರುತ್ತದೆ.

Advertisement

ನುಗ್ಗೆಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್‌- ಬೆಳ್ತಿಗೆ ಅಕ್ಕಿ, 1 ಚಮಚ ಕೊತ್ತಂಬರಿ, 2 ಚಮಚ ಜೀರಿಗೆ, 8-10 ಒಣಮೆಣಸು, ಸ್ವಲ್ಪ ಹುಳಿ, 1/2 ಕಪ್‌ ತೆಂಗಿನತುರಿ, 4 ಹಿಡಿ ನುಗ್ಗೆಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು 1-2 ಗಂಟೆ ನೆನೆಸಿ. ಬಳಿಕ ಒಣಮೆಣಸು, ಕೊತ್ತಂಬರಿ, ಜೀರಿಗೆ, ಹುಳಿ ಸೇರಿಸಿ ರುಬ್ಬಿ. ನಂತರ ತೆಂಗಿನತುರಿ, ಅಕ್ಕಿ ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ಸಣ್ಣಗೆ ಹೆಚ್ಚಿದ ಸೊಪ್ಪನ್ನು ಸೇರಿಸಿ ಬಾಡಿಸಿದ ಬಾಳೆಲೆಯಲ್ಲಿ ಹಾಕಿ ಹಬೆಯಲ್ಲಿ ಬೇಯಿಸಿ. ಈಗ ರುಚಿಯಾದ ನುಗ್ಗೆಸೊಪ್ಪಿನ ಪತ್ರೊಡೆ ಸವಿಯಲು ಸಿದ್ಧ.

ನುಗ್ಗೆಸೊಪ್ಪಿನ ಬಾತ್‌
ಬೇಕಾಗುವ ಸಾಮಗ್ರಿ: 1 ಕಪ್‌ ಬೆಳ್ತಿಗೆ ಅಕ್ಕಿ, 2 ಕಪ್‌ ನುಗ್ಗೆಸೊಪ್ಪು, 3 ಟೀ ಚಮಚ ಕೊತ್ತಂಬರಿ, 1/4 ಚಮಚ ಜೀರಿಗೆ, 1/4 ಚಮಚ ಮೆಂತೆ, 3-4 ಹಸಿಮೆಣಸು, 1/2 ಚಮಚ ಹುಳಿ, ಹುಡಿ ಉಪ್ಪು ರುಚಿಗೆ ತಕ್ಕಷ್ಟು, 5 ಚಮಚ ಎಣ್ಣೆ , 3 ಕಪ್‌ ನೀರು, 1 ನೀರುಳ್ಳಿ, 1 ಚಮಚ ಸಾಸಿವೆ, 1 ಚಮಚ ಕಡಲೆಬೇಳೆ, 1 ಕಪ್‌ ತೆಂಗಿನ ತುರಿ, 1/4 ಚಮಚ ಅರಸಿನ.

ತಯಾರಿಸುವ ವಿಧಾನ: ಉದುರಾದ ಅನ್ನ ಮಾಡಿಕೊಳ್ಳಿ. ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದಾಗ ಕೊತ್ತಂಬರಿ, ಜೀರಿಗೆ, ಮೆಂತೆ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ತೆಂಗಿನ ತುರಿ, ಹುಳಿ, ಉಪ್ಪು ಮತ್ತು ಹುರಿದ ಮಸಾಲೆ ಸೇರಿಸಿ ಒಟ್ಟಿಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ನಂತರ ಬಿಸಿಯಾದಾಗ ಸಾಸಿವೆ, ಕಡಲೆಬೇಳೆ ಹಾಕಿ. ಸಿಡಿದಾಗ ನೀರುಳ್ಳಿ ಹಾಕಿ ಬಾಡಿಸಿ. ನಂತರ ನುಗ್ಗೆಸೊಪ್ಪು ಹಾಕಿ ಬಾಡಿಸಿ. ಅದಕ್ಕೆ ಸ್ವಲ್ಪ ಅರಸಿನ ಹಾಕಿ ಈ ಒಗ್ಗರಣೆಗೆ ಅನ್ನ ಮತ್ತು ಮಸಾಲೆ ಹಾಕಿ ಚೆನ್ನಾಗಿ ತೊಳಸಿ.

ನುಗ್ಗೆಸೊಪ್ಪು ಸಾಂಬಾರು
ಬೇಕಾಗುವ ಸಾಮಗ್ರಿ: 2 ಕಪ್‌ ನುಗ್ಗೆಸೊಪ್ಪು , 1/2 ಕಪ್‌ ತೊಗರಿಬೇಳೆ, 1 ಚಮಚ ಕೆಂಪು ಮೆಣಸಿನಪುಡಿ, ಸಣ್ಣ ತುಂಡು ಹುಳಿ, ಚಿಟಿಕೆ ಅರಸಿನ, 1 ಚಮಚ ಉದ್ದಿನಬೇಳೆ, 2 ಚಮಚ ಕೊತ್ತಂಬರಿ, ಚಿಟಿಕೆ ಮೆಂತೆ, ಚಿಟಿಕೆ ಜೀರಿಗೆ, 1 ಕಪ್‌ ತೆಂಗಿನತುರಿ, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು , ಸಣ್ಣ ತುಂಡು ಬೆಲ್ಲ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು.

ತಯಾರಿಸುವ ವಿಧಾನ: ನುಗ್ಗೆಸೊಪ್ಪನ್ನು ಚೆನ್ನಾಗಿ ತೊಳೆದು ಉಪ್ಪು-ಹುಳಿ, ಮೆಣಸಿನಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ತೊಗರಿಬೇಳೆಯನ್ನು ಬೇಯಿಸಿ. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿಯದಾಗ ಉದ್ದಿನಬೇಳೆ, ಕೊತ್ತಂಬರಿ, ಮೆಂತೆ, ಜೀರಿಗೆ, 4 ಒಣಮೆಣಸು ಸೇರಿಸಿ ಹುರಿದು ಅರಸಿನ ಸೇರಿಸಿ ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೇಯಿಸಿದ ನುಗ್ಗೆಸೊಪ್ಪಿಗೆ ತೊಗರಿಬೇಳೆ, ರುಬ್ಬಿದ ಮಸಾಲೆ, ಸಾಕಷ್ಟು ನೀರು ಹಾಕಿ ಕುದಿಸಿ. ನಂತರ ಸಾಸಿವೆ, ಕೆಂಪು ಮೆಣಸಿನ ತುಂಡು, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ಈಗ ರುಚಿಯಾದ ನುಗ್ಗೆಸೊಪ್ಪಿನ ಸಾಂಬಾರು ಅನ್ನ ಚಪಾತಿಯೊಂದಿಗೆ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next