ನವದೆಹಲಿ: ಪಾಕಿಸ್ತಾನದಿಂದ ಸರಬರಾಜಾಗಿದ್ದ ಭಾರೀ ಪ್ರಮಾಣದ ಮಾದಕವಸ್ತುವನ್ನು ಕೇರಳದ ಕೊಚ್ಚಿ ಕರಾವಳಿ ಪ್ರದೇಶದಲ್ಲಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (NCB) ವಶಪಡಿಸಿಕೊಂಡಿರುವ ಪ್ರಕರಣ ನಡೆದಿದೆ.
ಇದನ್ನೂ ಓದಿ:Soft Signal ನಿಯಮವನ್ನೇ ತೆಗೆದು ಹಾಕಿದ ICC: ಏನಿದು ಸಾಫ್ಟ್ ಸಿಗ್ನಲ್? ಇಲ್ಲಿದೆ ಡಿಟೈಲ್ಸ್
ಕೇರಳದ ಕೊಚ್ಚಿಯಲ್ಲಿ ಎನ್ ಸಿಬಿ ಅಧಿಕಾರಿಗಳು 2,525 ಕೆಜಿ ಮೆಥಾಂಫೆಟಮೈನ್ (ಮಾದಕ ವಸ್ತು) ಅನ್ನು ವಶಪಡಿಸಿಕೊಂಡಿದ್ದು, ಕಾಳಸಂತೆಯಲ್ಲಿ ಇದರ ಮೌಲ್ಯ 12,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆದರೆ ಎನ್ ಸಿಬಿ ಅಧಿಕಾರಿಗಳ ಮೂಲಗಳ ಪ್ರಕಾರ, ವಶಪಡಿಸಿಕೊಂಡಿರುವ ಮೆಥಾಂಫೆಟಮೈನ್ ಉತ್ತಮ ದರ್ಜೆಯದ್ದಾಗಿದ್ದು, ಇದರ ಮಾರುಕಟ್ಟೆ ಮೌಲ್ಯ 25,000 ಕೋಟಿ ರೂಪಾಯಿ ಎಂದು ತಿಳಿಸಿದೆ. ಅಷ್ಟೇ ಅಲ್ಲ ಭಾರತದಲ್ಲಿ ವಶಪಡಿಸಿಕೊಂಡಿರುವ ಅತೀ ದೊಡ್ಡ ಪ್ರಕರಣ ಇದಾಗಿದೆ ಎಂದು ಹೇಳಿದೆ.
ಭಾರೀ ಮೊತ್ತದ ಮಾದಕ ವಸ್ತು ರವಾನೆಯ ಹಿಂದೆ ಪಾಕಿಸ್ತಾನದ ಹಾಜಿ ಸಲೀಂ ಡ್ರಗ್ ಗ್ಯಾಂಗ್ ಕೈವಾಡ ಇದ್ದಿರುವುದಾಗಿ ವರದಿ ವಿವರಿಸಿದೆ. ಗ್ರೇಡ್ ಮತ್ತು ಗುಣಮಟ್ಟದ ಆಧಾರದ ಮೇಲೆ ಡ್ರಗ್ ಬೆಲೆ ನಿರ್ಧಾರವಾಗುತ್ತದೆ. ನಾವೀಗ ವಶಪಡಿಸಿಕೊಂಡಿರುವ ಮಾದಕ ವಸ್ತು ಉನ್ನತ ಗುಣಮಟ್ಟದ್ದಾಗಿದ್ದು, ಮಾರುಕಟ್ಟೆಯಲ್ಲಿ ಇದರ ಮೌಲ್ಯ 25,000 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಜೀ ಸಲೀಂ ಡ್ರಗ್ ದಂಧೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಪಾಕಿಸ್ತಾನಿ ಯುವಕನೊಬ್ಬನನ್ನು ಈ ಸಂದರ್ಭದಲ್ಲಿ ಬಂಧಿಸಲಾಗಿದೆ. ಈತ ಹಿಂದೆಯೂ ಅಂತರಾಷ್ಟ್ರೀಯ ಡ್ರಗ್ ಕಳ್ಳಸಾಗಣೆ ದಂಧೆಯಲ್ಲಿ ಶಾಮೀಲಾಗಿದ್ದ ಎಂದು ವರದಿ ತಿಳಿಸಿದೆ.