ಮುಂಬೈ: ಸುಮಾರು 1,400 ಕೋಟಿ ರೂಪಾಯಿಯಷ್ಟು ಮೌಲ್ಯದ 700ಕ್ಕೂ ಅಧಿಕ ಕೆಜಿಗಳಷ್ಟು ಮೆಫೆಡ್ರೋನ್ ಮಾದಕ ವಸ್ತುವನ್ನು ಮುಂಬೈ ಪೊಲೀಸರು ಗುರುವಾರ (ಆಗಸ್ಟ್ 04) ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಳೆಗುಂದಿದ ಪಣಂಬೂರು ಬೀಚ್ ಸೌಂದರ್ಯ; ಭಾರೀ ಗಾಳಿ, ಮಳೆಗೆ ಕಡಲ್ಕೊರೆತ
ಪಾಲ್ಘಾಟ್ ಜಿಲ್ಲೆಯ ನಳಸೋಪಾರಾ ಎಂಬಲ್ಲಿ ಔಷಧ ತಯಾರಿಕೆ ಘಟಕದ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ಮುಂಬೈ ಕ್ರೈ ಬ್ರ್ಯಾಂಚ್ ನ ಮಾದಕ ವಸ್ತು ನಿಗ್ರಹಪಡೆ(ಎಎನ್ ಸಿ) ಔಷಧ ಘಟಕದ ಮೇಲೆ ದಾಳಿ ನಡೆಸಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ. ಔಷಧ ಘಟಕದ ಮೇಲೆ ದಾಳಿ ಮಾಡಿದ ವೇಳೆ ನಿಷೇಧಿತ ಮೆಫೆಡ್ರೋನ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಮುಂಬೈಯಲ್ಲಿ ನಾಲ್ವರು ಆರೋಪಿಗಳನ್ನು ನಳಸೋಪಾರಾದಲ್ಲಿ ಮತ್ತೊಬ್ಬ ಆರೋಪಿಯನ್ನು ಸೆರೆ ಹಿಡಿಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.