ಬೆಂಗಳೂರು: ದೆಹಲಿಯಿಂದ ಮಾದಕ ವಸ್ತು ತರಿಸಿಕೊಂಡು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಮಾನ್ಯೂಯಲ್ ಲೋಟೋಚುಕುವಾ (27) ಬಂಧಿತ ನೆಜೀರಿಯಾ ಪ್ರಜೆ. ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ 23 ಗ್ರಾಂ ಕೋಕೇನ್, 238 ಗ್ರಾಂ ಸಿಂಥೆಟಿಕ್ ಡ್ರಗ್ಸ್, 57 ಸಾವಿರ ರೂ. ನಗದು, 2 ಮೊಬೈಲ್ ಗಳನ್ನು, ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಮೂರು ವರ್ಷಗಳ ಹಿಂದೆ ವೈದ್ಯಕೀಯ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿ, ವಿದ್ಯಾರಣ್ಯಪುರದ ವಡೇರಹಳ್ಳಿ ಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆದುಕೊಂಡಿದ್ದ ಆರೋಪಿ, ಆ ನಂತರ ಜೀವನ ನಿರ್ವಹಣೆಗಾಗಿ ದೆಹಲಿಯಿಂದ ಮಾದಕ ವಸ್ತು ಕೋಕೇನ್ ಹಾಗೂ ಸಿಂಥೆಟಿಕ್ ಡ್ರಗ್ಸ್‌ಗಳನ್ನು ತರಿಸುತ್ತಿದ್ದ. ಬಳಿಕ ಅವುಗಳನ್ನು ಕೊರಿಯರ್ ಹಾಗೂ ಫುಡ್ ಡೆಲವರಿ ಬಾಯ್ ಗಳ ಮೂಲಕ ಗ್ರಾಹಕರಿಗೆ ಪೂರೈಕೆ ಮಾಡಿ, ಆನ್ ಲೈನ್ ಮೂಲಕ ಹಣ ಪಡೆಯುತ್ತಿದ್ದ. ಈ ಮಾಹಿತಿ ಮೇರೆಗೆ ಠಾಣಾಧಿಕಾರಿ ಸಿ.ಬಿ.ಶಿವಸ್ವಾಮಿ, ಪಿಎಸ್‌ಐ ಕೆ.ಎಲ್.ಪ್ರಭು ನೇತೃತ್ವದ ತಂಡ ಆತನ ಮನೆ ಮೇಲೆ ದಾಳಿ ನಡೆಸಿ ಮಾದಕ ವಸ್ತು ಸಮೇತ ಬಂಧಿಸಿದೆ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಿಸಬಹುದು ಎಂದು ಪೊಲೀಸರು ಹೇಳಿದರು.
ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.