Advertisement

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

12:11 PM Jul 04, 2024 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟದ 3 ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳಿಂದ 18.80 ಲಕ್ಷ ರೂ. ಮೌಲ್ಯದ ಗಾಂಜಾ, ಎಂಡಿಎಂಎ, ಎಕ್ಸೈಸಿ, ಕೋಕೇನ್‌ ಮತ್ತು ಬೈಕ್‌ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಐಷಾರಾಮಿ ಜೀವನಕ್ಕಾಗಿ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ, ನಗರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಫ್ರಿಕಾದ ಘಾನಾ ಮೂಲದ ಸಿರಿಲ್‌ (23) ಮತ್ತು ನೈಜೀರಿಯಾ ದೇಶದ ಇಮ್ಯಾನ್ಯೂಯಲ್‌(27) ಬಂಧಿತರು.

ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌, ಎಕ್ಸೈಸಿ ಪಿಲ್ಸ್‌, ಕೋಕೇನ್‌, 1 ಬೈಕ್‌ ವಶಕ್ಕೆ ಪಡೆಯಲಾಗಿದೆ.

Advertisement

ವ್ಯವಹಾರಿಕ ಮತ್ತು ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿರುವ ಆರೋಪಿಗಳು ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದರು. ಮೋಜಿನ ಜೀವನಕ್ಕಾಗಿ ಹಣ ಸಂಪಾದಿಸಲು ಗೋವಾ, ಮುಂಬೈ, ದೆಹಲಿಯಲ್ಲಿ ವಾಸವಾಗಿರುವ ತಮ್ಮ ದೇಶದ ಪ್ರಜೆಗಳಿಂದ ಡ್ರಗ್ಸ್‌ ಖರೀದಿಸುತ್ತಿದ್ದರು. ಬಳಿಕ ನಗರದಲ್ಲಿ ನಿರ್ದಿಷ್ಟ ಗ್ರಾಹಕರಿಗೆ ಪ್ರತಿ ಗ್ರಾಂಗೆ 10 ರಿಂದ 12 ಸಾವಿರ ರೂ.ವರೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಈ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಮತ್ತು ವಿದೇಶಿ ಕಾಯ್ದೆ ಅಡಿ ಕೇಸ್‌ ದಾಖಲಿಸಲಾಗಿದೆ. ಇನ್ನು ಆರೋಪಿಗಳ ಪೈಕಿ ಇಮ್ಯಾನ್ಯೂಯಲ್‌ ವಿರುದ್ಧ ಈ ಹಿಂದೆ ಪುಲಕೇಶಿನಗರ ಮತ್ತು ವಿದ್ಯಾರಣ್ಯಪುರ ಠಾಣೆಯಲ್ಲಿ ಎನ್‌ಡಿಪಿಎಸ್‌ ಮತ್ತು ವಿದೇಶಿ ಕಾಯ್ದೆ ಅಡಿ ಕೇಸ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಗಾಂಜಾ ಮಾರಾಟ: ಕೋಣನಕುಂಟೆ ಠಾಣೆ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ದೀಪಾಂಜಲಿನಗರ ನಿವಾಸಿ ವಿಕಾಸ್‌(23) ಬಂಧಿತ. ಆರೋಪಿಯಿಂದ 1.80 ಲಕ್ಷ ರೂ. ಮೌಲ್ಯದ 2 ಕೆ.ಜಿ. ಗಾಂಜಾ ಮತ್ತು 10 ಕೆ.ಜಿ. ಪಾಪ್ಪಿ ಸ್ಟ್ರಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಠಾಣೆ ವ್ಯಾಪ್ತಿಯ ನಾರಾಯಣನಗರದ ದೊಡ್ಡಕಲ್ಲಸಂದ್ರದ ಕೆರೆ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವಿ.ವಿ.ಪುರ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯ ಪಾರ್ವತಿಪುರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳ ಮೂಲದ ರಸೀಕ್‌ ಕುಮಾರ್‌ (22) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ 3 ಕೆ.ಜಿ 900 ಗ್ರಾಂ ಗಾಂಜಾ ಮತ್ತು ಎಲೆಕ್ಟ್ರಾನಿಕ್‌ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಡ್ರಗ್ಸ್‌ ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ. ಈ ಆರೋಪಿಯ ವಿರುದ್ಧ ಹಿಂದೆ ಸರ್ಜಾಪುರ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಕೇಸ್‌ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next