ಬೆಂಗಳೂರು: ಪದೇ ಪದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡುಗುವ ಆರೋಪಿಗಳು ಹಾಗೂ ರೌಡಿಶೀಟರ್‌ಗಳ ಪರೇಡ್ ಮಾಡುತ್ತಿದ್ದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಇದೇ ಮೊದಲ ಬಾರಿಗೆ ಮಾದಕ ವಸ್ತು ಸಾಗಿಸುವ ಆರೋಪಿಗಳ (ಡ್ರಗ್ಸ್ ಪೆಡ್ಲರ್‌ಗಳ) ಪರೇಡ್ ಮಾಡಿಸಿದ್ದಾರೆ. ಹಾಗೇ ಮಾದಕ ವಸ್ತುಗಳ ಸಾಗಣೆಯಲ್ಲಿ ತೊಡಗಿಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ನಗರದಾದ್ಯಂತ ಮಾದಕ ವಸ್ತು ಜಾಲದ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳು, ಆರು ಮಂದಿ ವಿದೇಶಿಯರು, ಪ್ರಮುಖ ಪೆಡ್ಲರ್‌ಗಳಾದ ಮೌಲಾ, ಅತಾವುಲ್ಲಾ, ಮಾರ್ಟಿನ್, ಸೋಮ, ಆದರ್ಶ, ಡಾಲಿಂಗ್‌ಟನ್ ಸೇರಿ ನಗರದ ಎಲ್ಲ ವಲಯಗಳ 63 ಮಂದಿ ಡ್ರಗ್ಸ್ ಪೆಡ್ಲರ್‌ಗಳು ಪರೇಡ್‌ಗೆ ಹಾಜರಾಗಿದ್ದರು. ಮತ್ತೂಮ್ಮೆ ಅಕ್ರಮ ದಂಧೆಯಲ್ಲಿ ತೊಡಗಿದರೆ, “ಕೋಕಾ’ ಕಾಯ್ದೆ ಹಾಗೂ “ಗೂಂಡಾ’ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದುವರೆಗೂ ರೌಡಿ ಚಟುವಟಿಕೆ ಮತ್ತು ಸಂಘಟಿತ ಅಪರಾಧಗಳಲ್ಲಿ ಭಾಗಿಯಾದವರ ಮೇಲೆ ಪ್ರಯೋಗಿಸಲಾಗುತ್ತಿದ್ದ “ಕೋಕಾ’ ಕಾಯ್ದೆಯನ್ನು ಮುಂದಿನ ದಿನಗಳಲ್ಲಿ ಡ್ರಗ್ಸ್ ಪೆಡ್ಲರ್‌ಗಳ ಮೇಲೂ ಪ್ರಯೋಗಿಸಲಾಗುವುದು. ಈ ವರ್ಷದಿಂದಲೇ ಇದನ್ನು ಆರಂಭಿಸುತ್ತೇವೆ. ಪದೇ ಪದೇ ಕೃತ್ಯದಲ್ಲಿ ಭಾಗಿಯಾಗುವ ಪೆಡ್ಲರ್‌ಗಳ ವಿರುದ್ಧ “ಕೋಕಾ’ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಒಂದು ವರ್ಷದವರೆಗೂ ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿಲಾಯಿತು. ಇದೇ ವೇಳೆ ಪರೇಡ್‌ಗೆ ಬಂದಿದ್ದ ಎಲ್ಲರ ಇತ್ತೀಚಿನ ಭಾವಚಿತ್ರ ಮತ್ತು ವಿಳಾಸವನ್ನು ಸಂಗ್ರಹಿಸಲಾಯಿತು.
ಚಟುವಟಿಕೆಗಳ ಮೇಲೆ ನಿಗಾ: ಪರೇಡ್‌ನಲ್ಲಿ ಭಾಗಿಯಾದ 63 ಮಂದಿ ಮಾತ್ರವಲ್ಲದೆ, ಗೈರಾಗಿರುವ ಇತರೆ ಮಾರಾಟಗಾರರ ಮಾಹಿತಿ ಸಂಗ್ರಹಿಸುವಂತೆ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ ಡಿಸಿಪಿ ಗಿರೀಶ್ ಸೂಚಿಸಿದ್ದಾರೆ. ಮುಂದಿನ ಬಾರಿ ನಡೆಯುವ ಪರೇಡ್‌ಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೆಡ್ಲರ್‌ಗಳು ಹಾಜರಾಗಬೇಕು. ಈ ಹಿಂದೆ ಬಂಧಿತರಾಗಿ ಜೈಲು ಸೇರಿದ್ದವರ ಮೇಲೆ ನಿಗಾವಹಿಸಬೇಕು. ಅವರ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಇರಬೇಕು. ಪದೇ ಪದೇ ಕೃತ್ಯದಲ್ಲಿ ಭಾಗಿಯಾಗುವ ಪೆಡ್ಲರ್‌ಗಳು ಮನೆ ಬದಲಾಯಿಸಿದರೆ, ಮೊಬೈಲ್ ನಂಬರ್ ಬದಲಾಯಿಸಿದರೆ, ಬೇರೆ ಪ್ರದೇಶಗಳಲ್ಲಿ ತಮ್ಮ ಜಾಲ ವಿಸ್ತರಿಸಲು ಯತ್ನಿಸುತ್ತಿದ್ದರೆ ಆ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ವಿದೇಶಿಯರಿಗೆ ಪ್ರತ್ಯೇಕ ಎಚ್ಚರಿಕೆ: ಪರೇಡ್‌ನಲ್ಲಿ ಹಾಜರಾಗಿದ್ದ 6 ಮಂದಿ ವಿದೇಶಿಯರಿಗೆ ಸಿಸಿಬಿ ಪೊಲೀಸರು ಪ್ರತ್ಯೇಕ ಎಚ್ಚರಿಕೆ ನೀಡಿದ್ದಾರೆ. ಆರು ಮಂದಿ ವಿದೇಶಿಯರ ವೀಸಾ, ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿದ ಪೊಲೀಸರು, ಮತ್ತೂಮ್ಮೆ ಈ ದಂಧೆಯಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು. ವಿದ್ಯಾರ್ಥಿ, ವ್ಯವಹಾರ, ವಾಣಿಜ್ಯ ಹಾಗೂ ಪ್ರವಾಸಿ ವೀಸಾದಡಿ ಬರುವ ವಿದೇಶಿಯರು ತಾವುಗಳು ವೀಸಾ ಅವಧಿ ಮುಕ್ತಾಯವಾಗುತ್ತಿದ್ದಂತೆ ವಿದೇಶಕ್ಕೆ ಮರಳಬೇಕು.
ಒಂದು ವೇಳೆ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿರುವುದಲ್ಲದೆ, ಅಕ್ರಮ ದಂಧೆಯಲ್ಲಿ ತೊಡಗಿದರೆ ಕೋಕಾ ಹಾಗೂ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು. ಇದೇ ವೇಳೆ ಕೆಲ ವಿದೇಶಿಯರು ಸ್ವಂತ ಊರಿಗೆ ತೆರಳಲು ಇಷ್ಟ ಪಡೆದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಂತಹ ವಿದೇಶಿಯರ ಪ್ರಕರಣಗಳನ್ನು ಬೇಗನೇ ಇತ್ಯರ್ಥ ಪಡಿಸಿ ಗಡಿಪಾರು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಿಸಿಬಿ ಪೊಲೀಸರು ಹೇಳಿದರು.