Advertisement
ಕೆಲವು ದಿನಗಳ ಹಿಂದೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಕಳೆದ ವರ್ಷ ನಗರದ ಕಾಲೇಜೊಂದರ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ 15ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದವು.
ಈ ಡ್ರಗ್ಸ್ ಜಾಲದಲ್ಲಿ ಬಂಧಿತರಾಗುವ ಆರೋಪಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಆದರೆ ಪ್ರಕರಣದ ಗಂಭೀರತೆ ಅರಿತು ಡ್ರಗ್ಸ್‌ನ ಮೂಲ ಎಲ್ಲಿಯದ್ದು ಎಂಬ ತನಿಖೆ ನಡೆದಿದ್ದರೆ ಸತ್ಯಾಂಶ ಹೊರ ಬರುತ್ತಿತ್ತು. ಜಾಮೀನು ಸಿಗುತ್ತದೆ ಎಂಬ ಕಾರಣಕ್ಕೆ ಆರೋಪಿಗಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಅಮಲು ಪದಾರ್ಥ ಸಾಗಾಟ, ಪೂರೈಕೆ ಎಗ್ಗಿಲ್ಲದೆ ಸಾಗಿದೆ. ಹದಿಹರೆಯದವರು ಬಲಿಯಾಗುತ್ತಿದ್ದಾರೆ. ಇಷ್ಟಾದರೂ ಪೊಲೀಸ್ ಇಲಾಖೆ ಮಾತ್ರ ಮಾರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪೋಷಕರು ಸೇರಿದಂತೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸ್ಥಾನದಲ್ಲಿಯೇ ವಿಲೇ!
ನಗರದ ಮುಖ್ಯ ಬಸ್ ನಿಲ್ದಾಣದ ಬಳಿ, ನೆಲ್ಲಿಕಟ್ಟೆ ಹಳೆ ಶಾಲಾ ಕಟ್ಟಡದ ಸಮೀಪ ಗಾಂಜಾ ವ್ಯವಹಾರ ನಡೆಸಿ ವಿದ್ಯಾರ್ಥಿಗಳನ್ನು ಖೆಡ್ಡಾಕ್ಕೆ ಬೀಳಿಸಲಾಗುತ್ತಿದೆ ಎನ್ನುವ ಆತಂಕಕಾರಿ ವಿಚಾರಗಳು ಹರಿದಾಡುತ್ತಿವೆ. ಅನುಮಾನಕ್ಕೆ ಸಾಕ್ಷಿಯೆಂಬಂತೆ ನೆಲ್ಲಿಕಟ್ಟೆಯಲ್ಲಿ ಕುಸಿಯುವ ಹಂತಕ್ಕೆ ತಲುಪಿರುವ ಹಳೆ ಕಟ್ಟಡದೊಳಗೆ ಅಮಲು ಪದಾರ್ಥ, ಸಿಗರೇಟು ತುಂಡುಗಳು ಕಂಡುಬಂದಿವೆ. ಈ ಕಟ್ಟಡದ ಸುತ್ತ ರಾತ್ರಿ ವೇಳೆ ಪೊಲೀಸ್ ರಕ್ಷಣೆ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ನಿರ್ಜನವಾಗಿರುವ ಈ ಕಟ್ಟಡದೊಳಗೆ ಅಕ್ರಮ ವ್ಯವಹಾರ ನಡೆಯುವ ಬಗ್ಗೆ ಈ ಹಿಂದೆಯೇ ಅನುಮಾನ ವ್ಯಕ್ತವಾಗಿತ್ತು.
Related Articles
ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಅಮಲು ಪದಾರ್ಥ ಪೂರೈಸಲಾಗುತ್ತಿದೆ. ವಾರದ ನಿರ್ದಿಷ್ಟ ದಿನ, ಸಮಯದಲ್ಲಿ ಕಾಲೇಜು ಪರಿಸರ, ಪಿ.ಜಿ. ಮೊದಲಾದೆಡೆ ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಕೆಲವು ಪೇಯಿಂಗ್ ಗೆಸ್ಟ್‌ಗಳ ಬಳಿ ಡ್ರಗ್ಸ್ ಮಾರಾಟ ಸುರಕ್ಷಿತವೆನಿಸಿದೆ. ಕಾಲೇಜು ಪರಿಸರ, ಪಿ.ಜಿ.ಗಳ ಬಳಿ ಮಾರಾಟ ಮಾಡಿದರೆ, ಅದು ಪೊಲೀಸರ ಗಮನಕ್ಕೂ ಬರುವುದಿಲ್ಲ ಅನ್ನುವುದು ಡ್ರಗ್ಸ್ ಮಾರಾಟದಾರರಿಗೂ ಚೆನ್ನಾಗಿ ಅರಿವಿದೆ.
Advertisement
ಹೊರರಾಜ್ಯದಿಂದ ಪೂರೈಕೆ?ಅಮಲು ಪದಾರ್ಥದ ಬಹು ದೊಡ್ಡ ಜಾಲವೇ ಹಬ್ಬಿದೆ. ಕೇರಳ- ಪುತ್ತೂರು ಕೇಂದ್ರೀಕೃತವಾಗಿ ಸಾಗಾಟ ನಡೆಸುತ್ತಿರುವ ಅನುಮಾನ ಮೂಡಿದೆ. ದರ್ಬೆ, ಕೂರ್ನಡ್ಕ, ನೆಲ್ಲಿಕಟ್ಟೆ, ಬೊಳುವಾರು, ನೆಹರೂನಗರ ಸೇರಿದಂತೆ ಆಯ್ದ ಭಾಗವನ್ನು ಗುರಿಯಾಗಿಸಿ ಡ್ರಗ್ಸ್ ಪೂರೈಸಲಾಗುತ್ತಿದೆ ಎನ್ನಲಾಗಿದೆ.