ಬೆಂಗಳೂರು: ನೇಪಾಳದಿಂದ ಬೆಂಗಳೂರಿಗೆ ಮಾದಕ ವಸ್ತು ಚರಸ್ ಮತ್ತು ಹ್ಯಾಶಿಸ್ ಆಯಿಲ್ ಸರಬರಾಜ ಮಾಡುತ್ತಿದ್ದ ಬೆಂಗಳೂರಿನ ಡ್ರಗ್ಸ್ ಪೆಡ್ಲರ್ ಸೇರಿ ಮೂವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಉತ್ತರಪ್ರದೇಶದ ಲಕ್ನೋದಿಂದ ಬೆಂಗಳೂರಿಗೆ ರೈಲಿನ ಮೂಲಕ ಹ್ಯಾಶಿಸ್ ಆಯಿಲ್, ಚರಸ್ ತರುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಅವರಿಂದ 3.176 ಕೆ.ಜಿ. ಹ್ಯಾಶಿಸ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಅವರ ಮಾಹಿತಿ ಮೇರೆಗೆ ಮಾದಕ ವಸ್ತು ಪಡೆಯಲು ಕಾಯುತ್ತಿದ್ದ ಬೆಂಗಳೂರಿನ ಮತ್ತೊಬ್ಬ ಪೆಡ್ಲರ್‌ನನ್ನು ಬಂಧಿಸಲಾಗಿದೆ.
ಆರೋಪಿಗಳು ಹ್ಯಾಶಿಸ್ ಆಯಿಲ್ ಅನ್ನು ಸಣ್ಣ- ಸಣ್ಣ ಆರು ಪ್ಯಾಕೆಟ್‌ಗಳನ್ನಾಗಿ ಮಾಡಿ ಬಟ್ಟೆಯ ಮಧ್ಯದಲ್ಲಿ ಇಟ್ಟುಕೊಂಡು ಸುಲಭವಾಗಿ ಉತ್ತರಪ್ರದೇಶದಿಂದ ನಗರಕ್ಕೆ ರೈಲಿನ ಮೂಲಕ ಸಾಗಿಸುತ್ತಿದ್ದರು. ಅದನ್ನು ನೇಪಾಳದಿಂದ ಕಳ್ಳ ಸಾಗಾಣೆ ಮೂಲಕ ತರಿಸಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಗಾಂಜಾ ಗಿಡಗಳಿಂದ ತಯಾರಿಸುವ ಈ ಹ್ಯಾಶಿಸ್ ಆಯಿಲ್ ಅನ್ನು ಧೂಮಪಾನ, ಪೈಪ್ ಮೂಲಕ ಸೇವನೆ ಮಾಡುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಹೃದಯಘಾತ, ಚಿಂತನಹೀನ ಶಕ್ತಿ, ದೈಹಿಕ ಶಕ್ತೀಹೀನ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.