Advertisement

ಮಂಗಳೂರು: ಜೈಲಿನೊಳಗೇ “ಡ್ರಗ್ಸ್‌ ಡಿ-ಎಡಿಕ್ಷನ್‌ ಸೆಂಟರ್‌’!

12:35 AM May 25, 2023 | Team Udayavani |

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮಾದಕ ಪದಾರ್ಥಗಳ ನಶೆ ಹೆಚ್ಚಾಗಿದ್ದು ಡ್ರಗ್ಸ್‌ ಚಟವಿರುವ ಕೈದಿಗಳನ್ನು ನಿಯಂತ್ರಿಸುವುದು, ಡ್ರಗ್ಸ್‌ ಪೂರೈಕೆ ತಡೆಯುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಕಾರಾಗೃಹದೊಳಗೆಯೇ “ಡ್ರಗ್ಸ್‌ ಡಿ-ಎಡಿಕ್ಷನ್‌ ಸೆಂಟರ್‌’ ಆರಂಭಿಸಲು ನಿರ್ಧರಿಸಿದ್ದಾರೆ.

Advertisement

ವಿಚಾರಣಾಧೀನ ಕೈದಿಗಳ ಪೈಕಿ ಡ್ರಗ್ಸ್‌ ಚಟವುಳ್ಳವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡ್ರಗ್ಸ್‌ ಸೇವನೆ, ಮಾರಾಟ, ಸಾಗಾಟ ಮೊದಲಾದ ಪ್ರಕರಣಗಳಲ್ಲಿ ಎನ್‌ಡಿಪಿಎಸ್‌ ಕಾಯಿದೆಯಡಿ ಬಂಧಿಸಲ್ಪಟ್ಟವರು, ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಜತೆಗೆ ಡ್ರಗ್ಸ್‌ ಚಟ ಕೂಡ ಹೊಂದಿದವರು ಕಾರಾಗೃಹಕ್ಕೆ ಬಂದಾಗ ಅವರ ವರ್ತನೆ ಅತಿರೇಕದಿಂದ ಕೂಡಿರುತ್ತದೆ. ಕೆಲವರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಜೈಲಿನೊಳಗಿರುವ ಡ್ರಗ್ಸ್‌ ಚಟವುಳ್ಳ ಕೈದಿಗಳು ಹೇಗಾದರೂ ಡ್ರಗ್ಸ್‌ ಪಡೆಯಬೇಕೆಂದು ನಾನಾ ವಿಧದ ದಾರಿ ಹುಡುಕುತ್ತಿದ್ದಾರೆ. ಅವರ ಬೇಡಿಕೆ ಪೂರೈಸುವುದಕ್ಕಾಗಿ ಸಂಬಂಧಿಕರು, ಹಿತೈಷಿಗಳು ಕಾರಾಗೃಹದೊಳಗೆ ಡ್ರಗ್ಸ್‌ ಪೂರೈಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕಾರಾಗೃಹದೊಳಗೆ ಡ್ರಗ್ಸ್‌ ಪೂರೈಕೆಯಾಗದಂತೆ ತಪಾಸಣೆ ನಡೆಸುವುದು ಕೂಡ ಇನ್ನೊಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.

ಶೀಘ್ರದಲ್ಲೇ ಡಿ-ಎಡಿಕ್ಷನ್‌ ಸೆಂಟರ್‌
ಸದ್ಯ ಮಂಗಳೂರು ಜೈಲಿನಲ್ಲಿ ಓರ್ವ ಆಪ್ತ ಸಮಾ ಲೋಚಕ ರಿದ್ದಾರೆ. ಅವರು ಡ್ರಗ್ಸ್‌ ಚಟವುಳ್ಳ ಕೈದಿಗಳಿಗೆ ಸಾಧ್ಯವಾದಷ್ಟು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೂಡ ಕೊಡಿಸುತ್ತಿದ್ದಾರೆ. ಆದರೆ ಅದು ಹೆಚ್ಚು ಪರಿಣಾಮ ಬೀರುತ್ತಿಲ್ಲ. ಹಾಗಾಗಿ ಕಾರಾಗೃಹದೊಳಗೆ “ಡ್ರಗ್ಸ್‌ ಡಿ-ಎಡಿಕ್ಷನ್‌ ಸೆಂಟರ್‌’ (ಮಾದಕ ಪದಾರ್ಥ ವಿಮುಕ್ತಿ ಕೇಂದ್ರ) ಮಾದರಿಯಲ್ಲಿ ಘಟಕವೊಂದನ್ನು ನಿರ್ಧರಿಸಲಾಗಿದೆ. ಇದರಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಆಪ್ತ ಸಮಾಲೋಚಕರು ಹಾಗೂ ರೋಶನಿ ನಿಲಯದ ತಜ್ಞ ಆಪ್ತಸಮಾಲೋಚಕರು, ಪರಿಣತರು ಇರುತ್ತಾರೆ. ನಿರಂತರವಾಗಿ ಡ್ರಗ್ಸ್‌ ಅಪಾಯದ ಬಗ್ಗೆ ತಿಳಿವಳಿಕೆ, ಅಗತ್ಯ ಬಿದ್ದರೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್‌ ಸಾಗಿಸಲು ನಾನಾ ಮಾರ್ಗ
ಉಪ್ಪಿನಕಾಯಿ ಡಬ್ಬದಲ್ಲಿ, ಚಪ್ಪಲಿಗಳಲ್ಲಿ, ದೇಹದ ಇತರ ಭಾಗಗಳಲ್ಲಿ ಗಾಂಜಾ ಮತ್ತಿತರ ನಿಷೇಧಿತ ಮಾದಕ ವಸ್ತುಗಳನ್ನು ಅಡಗಿಸಿಟ್ಟು ಕೈದಿಗಳಿಗೆ ನೀಡುವ ಪ್ರಯತ್ನಗಳು ಮಂಗಳೂರು ಕಾರಾಗೃಹದಲ್ಲಿ ನಡೆದಿದ್ದವು. ಹಲವರನ್ನು ಬಂಧಿಸಲಾಗಿತ್ತು. ಓರ್ವ ಕಾರಾಗೃಹ ಸಿಬಂದಿ ಕೂಡ ಗಾಂಜಾ ಪೂರೈಕೆಯಲ್ಲಿ ತೊಡಗಿದ್ದು ಬೆಳಕಿಗೆ ಬಂದಿತ್ತು. ಪೊಲೀಸ್‌ ಆಯುಕ್ತರು 300ಕ್ಕೂ ಅಧಿಕ ಪೊಲೀಸರೊಂದಿಗೆ ತೆರಳಿ ತಪಾಸಣೆ ನಡೆಸಿದ್ದರು. 2018ರಲ್ಲಿ ವಿಚಾರಣಾಧೀನ ಕೈದಿಯೋರ್ವನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಬಂಧಿಸಲಾಗಿತ್ತು. 2017ರಲ್ಲಿ ಕೈದಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿತ್ತು.

ಕಾರಾಗೃಹದ ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳು
ಕಾರಾಗೃಹದ ಸಾಮರ್ಥ್ಯ 250 ಮಂದಿ. ಪ್ರಸ್ತುತ 371 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಕಾರಾಗೃಹದ ಕರ್ತವ್ಯಗಳಿಗೆ ವಿವಿಧ ಹಂತದ ಒಟ್ಟು 107 ಹುದ್ದೆಗಳು ಮಂಜೂರಾಗಿವೆ. ಪ್ರಸ್ತುತ 67 ಮಂದಿ ಸೇವೆಗೆ ಲಭ್ಯರಿದ್ದಾರೆ. ಇದರಲ್ಲಿಯೂ ಕೆಲವರಿಗೆ ಒಒಡಿ ಕರ್ತವ್ಯವಿದೆ. 23 ಮಂದಿ ಕೆಎಸ್‌ಐಎಸ್‌ಎಫ್‌ನ ಸಿಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಕೈದಿಗಳ ಭೇಟಿಗೆ ಬರುವವರು, ಅಧಿಕಾರಿಗಳು, ಸಿಬಂದಿ ಸೇರಿದಂತೆ ಪ್ರತಿಯೋರ್ವರನ್ನೂ ಕೆಎಸ್‌ಐಎಸ್‌ಎಫ್ನವರು ತಪಾಸಣೆಗೊಳಪಡಿಸುತ್ತಿದ್ದಾರೆ.

Advertisement

100ಕ್ಕೂ ಅಧಿಕ ನಶೆ ದಾಸರು!
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಪ್ರಸ್ತುತ 371 ಮಂದಿ ವಿಚಾರಣಾಧೀನ ಕೈದಿಗಳಿದ್ದು ಅದರಲ್ಲಿ 65 ಮಂದಿ ಎನ್‌ಡಿಪಿಎಸ್‌ ಕಾಯಿದೆಯಡಿ (ಡ್ರಗ್ಸ್‌ ಮಾರಾಟ/ಸೇವನೆ/ಸಾಗಾಟ) ಬಂಧಿಸಲ್ಪಟ್ಟವರು. ಇತರ ಕೃತ್ಯಗಳಲ್ಲಿ ಬಂಧಿತರಾದವರಲ್ಲಿಯೂ ಸುಮಾರು 35ಕ್ಕೂ ಮಂದಿ ಡ್ರಗ್ಸ್‌ ಚಟವುಳ್ಳವರಿದ್ದಾರೆ. ಒಟ್ಟು ಸಮಾರು 100 ಮಂದಿ ಡ್ರಗ್ಸ್‌ ಚಟದ ವಿಚಾರಣಾಧೀನ ಕೈದಿಗಳಿದ್ದಾರೆ.

ಉಡುಪಿ ಜೈಲಲ್ಲಿ ಕೌನ್ಸೆಲಿಂಗ್‌, ಚಿಕಿತ್ಸೆ
ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಎನ್‌ಡಿಪಿಎಸ್‌ ಕಾಯಿದೆಯಡಿ ಬಂಧಿಸಲ್ಪಟ್ಟಿರುವ ಸುಮಾರು 35 ಮಂದಿ ವಿಚಾರಣಾಧೀನ ಕೈದಿಗಳಿದ್ದು, ಅವರಿಗೆ ಕೆಎಂಎಸಿ ಆಸ್ಪತ್ರೆಯ ತಜ್ಞರ ನೆರವಿನೊಂದಿಗೆ ತಿಂಗಳಿಗೆ ಎರಡು ಬಾರಿ ಕೌನ್ಸೆಲಿಂಗ್‌, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್‌.ಬಿ. ಪಾಟೀಲ್‌ ಅವರು ತಿಳಿಸಿದ್ದಾರೆ.

ಕೈದಿಗಳು ಡ್ರಗ್ಸ್‌ ಚಟದಿಂದ ಹೊರಗೆ ಬರಬೇಕು. ಕಾರಾಗೃಹದಿಂದ ಬಿಡುಗಡೆಯಾದ ಅನಂತರ ಕೂಡ ಡ್ರಗ್ಸ್‌ ಮುಕ್ತ ಜೀವನ ನಡೆಸುವಂತಾಗಬೇಕು ಎಂಬುದು ಇಲಾಖೆಯ ಉದ್ದೇಶ. ಆ ನಿಟ್ಟಿನಲ್ಲಿ ಡಿ-ಎಡಿಕ್ಷನ್‌ ಘಟಕವನ್ನು ಶೀಘ್ರ ಕಾರ್ಯಗತಗೊಳಿಸಲಾಗುವುದು.
– ಟಿ.ಬಿ. ಓಬಳೇಶಪ್ಪ, ಮಂಗಳೂರು ಕಾರಾಗೃಹ ಅಧೀಕ್ಷಕರ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next