ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಾಪಕ ಜಗದೀಶ್, ಅವರ ಪತ್ನಿ ಸೌಂದರ್ಯ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಪುತ್ರ, ರಾಯಲ್ ಮೀನಾಕ್ಷಿ ಮಾಲ್ ಮಾಲಕ ವಿ. ಗಣೇಶ್‌ರಾವ್ ಅವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಗಲ್ರಾನಿ ಜತೆ ಮೂವರು ಸಂಪರ್ಕ ಹೊಂದಿದ್ದರು ಎಂಬ ಆರೋಪದಲ್ಲಿ ಕೆಲವು ದಿನಗಳ ಹಿಂದೆ ನೋಟಿಸ್ ನೀಡಲಾಗಿತ್ತು. ಮೂವರಿಂದಲೂ ಕೆಲವು ಮಾಹಿತಿ ಗಳನ್ನು ಲಿಖೀತ ರೂಪದಲ್ಲಿ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ಜಗದೀಶ್ ದಂಪತಿಯನ್ನು ಅಪರಾಹ್ನ ಮೂರು ಗಂಟೆಯವರೆಗೆ ವಿಚಾರಣೆ ನಡೆಸ ಲಾಗಿದೆ. ದಂಪತಿಯು ರಾಮ್‌ಲೀಲಾ, ಅಪ್ಪು-ಪಪ್ಪು ಸಹಿತ ಹಲವು ಸಿನೆಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಯಶವಂತಪುರ ಬಳಿ ಜೆಟ್‌ಲಾಗ್ ಎಂಬ ಪಬ್ ಮಾಲಕರಾಗಿದ್ದಾರೆ. ಈ ಪಬ್‌ನಲ್ಲಿ ಸೆಲೆಬ್ರಿಟಿಗಳ ದೊಡ್ಡ-ದೊಡ್ಡ ಪಾರ್ಟಿಗಳು ನಡೆಯುತ್ತಿದ್ದು, ಪ್ರಕರಣದಲ್ಲಿ ಬಂಧನವಾಗಿರುವ ದಿಲ್ಲಿಯ ವೀರೇನ್ ಖನ್ನಾ, ವೈಭವ್ ಜೈನ್, ಶ್ರೀ ಅಲಿಯಾಸ್ ಶ್ರೀಸುಬ್ರಹ್ಮಣ್ಯ, ಸಂಜನಾ ಗಲ್ರಾನಿ, ರಾಗಿಣಿ ಪಾಲ್ಗೊಳ್ಳುತ್ತಿದ್ದರು. ಜತೆಗೆ ರಾಮ್‌ಲೀಲಾ ಸಿನೆಮಾದಲ್ಲಿ ಸಂಜನಾ ನಟಿಸಿದ್ದರು. ಈ ಬಗ್ಗೆ ದಂಪತಿಯಿಂದ ಹಲವು ಮಾಹಿತಿಗಳನ್ನು ಪಡೆಯ ಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಿಯಾಂಕಾ ಆಳ್ವ ಗೈರು
ಸ್ಯಾಂಡಲ್‌ವುಡ್ ಪ್ರಕರಣದ ಆರನೇ ಆರೋಪಿ ಆದಿತ್ಯ ಆಳ್ವನ ಸಹೋದರಿ ಪ್ರಿಯಾಂಕಾ ಒಬೆರಾಯ್ ಮಂಗಳವಾರವೂ ವಿಚಾರಣೆಗೆ ಗೈರಾಗಿದ್ದಾರೆ. ಇದು ಆಕೆ ಎರಡನೇ ಬಾರಿ ವಿಚಾರಣೆಗೆ ಗೈರಾಗಿರುವುದಾಗಿದೆ.