ಬೆಂಗಳೂರು: ಮೂರು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಎಂಬ ಆರೋಪ ಇದೀಗ ಮತ್ತೆ ಕೇಳಿ ಬಂದಿದೆ. ಇತ್ತೀಚೆಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ 21 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸಂಗ್ರಹಿಸಿಟ್ಟಿದ್ದ ಆರೋಪದಲ್ಲಿ ಬಂಧನಕ್ಕೊಳಗಾದ ನೈಜೀರಿಯಾ ಪ್ರಜೆ ಲಿಯೋ ನಾರ್ಡ್ ಒಕ್ವುಡಿಲಿನ ವಿಚಾರಣೆಯಲ್ಲಿ ಆತ ಸ್ಯಾಂಡಲ್‌ವುಡ್‌ನ ನಟ-ನಟಿಯರ ಜತೆ ನಂಟು ಹೊಂದಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಲಿಯೋ ನಾರ್ಡ್ ಒಕ್ವುಡಿಲಿನ ಮನೆ ಮೇಲೆ ದಾಳಿ ನಡೆಸಿ 21 ಕೋಟಿ ರೂ. ಮೌಲ್ಯದ ಪಾರ್ಟಿ ಡ್ರಗ್ಸ್ ಎಂದು ಹೇಳುವ ಎಂಡಿಎಂಎ, ಕೋಕೇನ್ ಪತ್ತೆಯಾಗಿತ್ತು. ಆರೋಪಿ ಮಹಿಳೆಯರ ಚೂಡಿದಾರ, ಬಟ್ಟೆಗಳ ಬಾಕ್ಸ್, ಚಾಕಲೇಟ್, ಸೋಪ್ ಬಾಕ್ಸ್‌ಗಳ ಒಳ ಭಾಗದಲ್ಲಿ ಮಾದಕ ವಸ್ತು ಇಟ್ಟು ನೆರೆ ರಾಜ್ಯಗಳಿಂದ ತರಿಸಿಕೊಂಡು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ. ಹೊಸ ವರ್ಷದ ಸಂದರ್ಭದಲ್ಲಿ ನಗರ ಹಾಗೂ ನಗರದ ಹೊರ ವಲಯದಲ್ಲಿ ನಡೆಯುವ ಪಾರ್ಟಿಗಳಿಗೆ ಪೂರೈಕೆ ಮಾಡಲು ಸಿದ್ಧತೆ ನಡಸಿದ್ದ.
ಈ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಈತನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಸ್ಯಾಂಡಲ್‌ವುಡ್‌ನ ಕೆಲ ನಟ-ನಟಿಯರು ಈತನಿಂದ ಮಾದಕ ವಸ್ತು ಖರೀದಿಸುತ್ತಿದ್ದರು ಎಂಬುದು ಗೊತ್ತಾಗಿದೆ.ಅಲ್ಲದೆ, ಹೆಚ್ಚಾಗಿ ಕಿರುತೆರೆ ನಟ, ನಟಿಯರೇ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಈ ನಟ, ನಟಿಯರು ಗ್ರಾಹಕರಾಗಿದ್ದು, ಪೆಡ್ಲರ್‌ಗಳಲ್ಲ ಎನ್ನಲಾಗಿದೆ.
ಮತ್ತೂಂದೆಡೆ ಈತನ ಬಳಿ ಅಷ್ಟೊಂದು ಪ್ರಮಾ ಣದಲ್ಲಿ ಮಾದಕ ವಸ್ತು ಹೇಗೆ ಬಂತು ಎಂಬ ಬಗ್ಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಈತನ ಜತೆ ಬೇರೆ ಯಾರಾದರೂ ಪೆಡ್ಲರ್ ಇದ್ದಾರೆಯೇ? ಅವರು ಬೆಂಗಳೂರಿನವರಾ? ಅಥವಾ ನೆರೆ ರಾಜ್ಯದ ವರಾ? ಎಂಬ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್: ಮೂರು ವರ್ಷಗಳ ಹಿಂದೆ ಮಾದಕ ವಸ್ತು ಸೇವನೆ ಹಾಗೂ ಮಾರಾಟ ಪ್ರಕಣದಲ್ಲಿ ಸ್ಯಾಂಡಲ್‌ವುಡ್ ಇಬ್ಬರು ನಟಿಯರು ಹಾಗೂ ಅವರ ಆಪ್ತ ವಲಯದರು ಸೇರಿ 12ಕ್ಕೂ ಅಧಿಕ ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಕೆಲ ಕಿರುತೆರೆ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಹಿರಿಯ ನಟರ ಪುತ್ರರ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲವರನ್ನು ವಿಚಾರಣೆ ಕೂಡ ಮಾಡಲಾಗಿತ್ತು.
ಇದೀಗ ಮಾದಕ ವಸ್ತು ಮಾರಾಟ ಮತ್ತು ಸೇವನೆ ಜಾಲದಲ್ಲಿ ಮತ್ತೆ ಸ್ಯಾಂಡಲ್‌ವುಡ್ ಹೆಸರು ಕೇಳಿ ಬಂದಿದ್ದು, ನಟ-ನಟಿಯರು ಆತಂಕ ಉಂಟು ಮಾಡಿದೆ. ಪೆಡ್ಲರ್‌ಗಳಾಗಿದ್ದರೆ ಖಂಡಿತ ಕ್ರಮ: ಒಂದು ವೇಳೆ ಲಿಯೋ ನಾರ್ಡ್ ಒಕ್ವುಡಿಲಿ ಸಂಪರ್ಕದಲ್ಲಿರುವ ಸ್ಯಾಂಡಲ್ ವುಡ್‌ನ ನಟ-ನಟಿಯರು ಈತನಿಂದ ಖರೀದಿಸಿದ ಡ್ರಗ್ಸ್ ಗಳನ್ನು ಬೇರೆ ಯಾರಿಗಾದರೂ ಮಾರಾಟ ಮಾಡಿ ಹಣ ಸಂಪಾದಿಸಿದ್ದರೆ ಅವರನ್ನು ಡ್ರಗ್ಸ್ ಪೆಡ್ಲರ್‌ಗಳೆಂದು ಪರಿಗಣಿಸಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಒಂದು ವೇಳೆ ಗ್ರಾಹಕರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.