Advertisement

ಮಾದಕ ದ್ರವ್ಯ ಮಾರಾಟಗಾರರ ಸೆರೆ

12:05 PM Dec 26, 2018 | Team Udayavani |

ಬೆಂಗಳೂರು: ನಗರದಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯದ ನಿವಾಸಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ತ್ರಿಪುರ ರಾಜ್ಯದ ಮೂವರು ಆರೋಪಿಗಳು ತಿಲಕನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ತ್ರಿಪುರದ ಮಂದೀಪ್‌ ರೈ (40), ಮಿರ್ನಲ್‌ ಕಾಂತಿ ದೇವನಾಥ್‌ (33) ಮತ್ತು ಪ್ರಸನ್‌ ಜೀತ್‌ ದತ್ತ (23) ಬಂಧಿತರು. ಇವರಿಂದ 11 ಕೆ.ಜಿ. 200 ಗ್ರಾಂ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕೆಲ ವರ್ಷಗಳಿಂದ ಈಶಾನ್ಯ ರಾಜ್ಯದ ನಿವಾಸಿಗಳಿಗೆ ಗಾಂಜಾ ಪೂರೈಸುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರ ಪೈಕಿ ಮಂದೀಪ್‌ ರೈ 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಈಜಿಪುರದಲ್ಲಿ ವಾಸವಾಗಿದ್ದ. ಫಾಸ್ಟ್‌ ಫ‌ುಡ್‌ ಎಂಬ ಹೋಟೆಲ್‌ ಇಟ್ಟುಕೊಂಡಿದ್ದು, ಪಿಜಿಯೊಂದರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಾದಕ ವ್ಯಸನಿಗಳ ಬಗ್ಗೆ ತಿಳಿದುಕೊಂಡು, ಗಾಂಜಾ ಪೂರೈಕೆ ಮಾಡುವವರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ.

ಈ ಮಧ್ಯೆ ಕಾರ್ಯನಿಮಿತ್ತ ತ್ರಿಪುರಕ್ಕೆ ರೈ ಹೋಗಿದ್ದ, ಇತರೆ ಇಬ್ಬರು ಆರೋಪಿಗಳನ್ನು ಸಂಪರ್ಕಿಸಿ ನಿರಂತರ ಗಾಂಜಾ ಪೂರೈಕೆಗೆ ಒತ್ತಾಯಿಸಿದ್ದ. ಈ ಸಂಬಂಧ ಮಿರ್ನಲ್‌ ಕಾಂತಿ ಮತ್ತು ಪ್ರಸನ್‌ ಜೀತ್‌, ತ್ರಿಪುರದ ಪಶ್ಚಿಮ್‌ ಚರಗ್‌ ಭಾಗದಲ್ಲಿ ಅಕ್ರಮವಾಗಿ ಬೆಳೆವ ಗಾಂಜಾವನ್ನು ರೈಲಿನ ಮೂಲಕ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ನಗರಕ್ಕೆ ಬರುತ್ತಿದ್ದ ಆರೋಪಿಗಳಿಗೆ ಮಂದೀಪ್‌ ರೈ ಹೋಟೆಲ್‌ಗ‌ಳಲ್ಲಿ ತಂಗಲು ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದ. ಗಾಂಜಾ ಪೂರೈಕೆ ಮಾಡಿದ ಬಳಿಕ ಆರೋಪಿಗಳು ಊರಿಗೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಈಶಾನ್ಯ ನಿವಾಸಿಗಳೇ ಟಾರ್ಗೆಟ್‌: ಮಂದೀಪ್‌ ರೈ ತನಗೆ ಪರಿಚಯ ಇರುವ ಈಶಾನ್ಯ ರಾಜ್ಯದ ಹೋಟೆಲ್‌ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಜಯನಗರದ 5ನೇ ಬ್ಲಾಕ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ಮಂದಿ ಈಶಾನ್ಯ ರಾಜ್ಯದ ಸಿಬ್ಬಂದಿಗೆ ಮಂದೀಪ್‌ ರೈ ನಿರಂತರವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದ. ಈ ಎಲ್ಲ ಹೋಟೆಲ್‌ ಸಿಬ್ಬಂದಿ ತಿಲಕನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

Advertisement

ಒಂದು ವಾರದ ಹಿಂದೆ ಹೋಟೆಲ್‌ ಸಿಬ್ಬಂದಿ ವೈಯಕ್ತಿಕ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ಮಾಹಿತಿ ಪಡೆದ ತಿಲಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಹೋಟೆಲ್‌ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದರು.

ಹೋಟೆಲ್‌ನಲ್ಲಿ ವಾಸ್ತವ್ಯ: ಆರೋಪಿ ಮಂದೀಪ್‌ ರೈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೇ ವೇಳೆ ಮಿರ್ನಲ್‌ ಕಾಂತಿ ದೇವನಾಥ್‌ ಮತ್ತು ಪ್ರಸನ್‌ ಜೀತ್‌ ದತ್ತ ತ್ರಿಪುರದಿಂದ 10 ಕೆ.ಜಿ.ಗಾಂಜಾವನ್ನು ನಗರಕ್ಕೆ ತಂದಿದ್ದು, ಹೋಟೆಲ್‌ವೊಂದರಲ್ಲಿ ತಂಗಿದ್ದರು. ಈ ಮಾಹಿತಿ ಪಡೆದು ಮಂದೀಪ್‌ ರೈನನ್ನು ಹೋಟೆಲ್‌ಗೆ ಕರೆದೊಯ್ದು ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಲಾಗಿದೆ.

30-40 ಸಾವಿರಕ್ಕೆ ಮಾರಾಟ: ಪ್ರತಿ ಕೆ.ಜಿ.ಗಾಂಜಾಗೆ 10ರಿಂದ 15 ಸಾವಿರ ರೂ.ಗೆ ಖರೀದಿ ಮಾಡುತ್ತಿದ್ದ ಮಂದೀಪ್‌ ರೈ 30-40 ಸಾವಿರ ರೂ. ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಐಷಾರಾಮಿ ಜೀವನದ ಜತೆಗೆ ಹೊಸ ಹೋಟೆಲ್‌ ನಡೆಸಲು ಸಿದ್ಧತೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next