ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಗಾಂಜಾ ಘಾಟು ಹಬ್ಬಿದ್ದು, ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂಡದ ಮೇಲೆ ಪೊಲೀಸರು ದಾಳಿ ಮಾಡಿ, ಓರ್ವನ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ನಗರದ ಹೊರವಲಯದ ಸ್ವಾಮಿ ಸಮರ್ಥ ದೇವಾಲಯದ ಸಮೀಪ ಗಾಂಜಾ ಸಾಗಟ ಮಾಡುತ್ತಿದ್ದ ತಂಡವನ್ನು ಹಿಡಿಯಲು ರೌಡಿ ನಿಗ್ರಹ ದಳ ಪೊಲೀಸರು ತೆರಳಿದ್ದರು. ಈ ವೇಳೆ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು ಪೋಲಿಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆಗ ರೌಡಿ ನಿಗ್ರಹ ದಳದ ಪಿಎಸ್ ಐ ವಾಹಿದ್ ಕೋತ್ವಾಲ್ ಅವರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದು, ಆರೋಪಿ ಭೀಮು ಎಂಬಾತ ಬಲಗಾಲಿಗೆ ಗುಂಡು ತಾಗಿದೆ. ಆರೋಪಿ ಭೀಮು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ನಿವಾಸಿಯಾಗಿದ್ದು, ಆತನ ಜೊತೆ ಇನ್ನಿಬ್ಬರು ಸೇರಿಕೊಂಡು ಒಟ್ಟು ಮೂರು ಜನ ಸೇರಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕಾವೇರಿ ಹೆಚ್ಚುವರಿ ನೀರಿಗೆ ತಮಿಳುನಾಡು ಕಣ್ಣು: ಇದಕ್ಕೆಲ್ಲಾ ಅವಕಾಶವಿಲ್ಲ ಎಂದ ಬಿಎಸ್ ವೈ
ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 300 ಕೆ.ಜಿ.ಗೂ ಅಧಿಕ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಯಾಳು ಆರೋಪಿ ಭೀಮುವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.